ಕನ್ನಡದ ವಿಶಾಲದ ಬ್ಲಾಗುಗಳ ಲೋಕದಲ್ಲಿ ವಿಹರಿಸುವಾಗ ಎಡತಾಕುವ
ಬ್ಲಾಗುಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನೆಲ್ಲಾ
ಸಂಗ್ರಹಿಸಿಡುವ ಉದ್ದೇಶ ಈ ಲೇಖನಗಳದ್ದು. ಐದೈದೇ ಪ್ರತಿಕ್ರಿಯೆಗಳ ಗುಚ್ಚಗಳಿವು.

……………………………………………………………………….

ಓ ನನ್ನ ಚೇತನಾ

“ನಮಗರ್ಥವಾಗದ ಪೊಲಿಟಿಕ್ಸ್!? “

ಈ ಬಾರಿಯ ಚುನಾವಣೆಯ ಸಮಯದಲ್ಲಿ ರಾಜಕಾರಣದಲ್ಲಿನ ಅವಾಂತರಗಳನ್ನು ಹಳಿಯುವವರ ಪಟ್ಟಿಯಲ್ಲಿ ರಾಜಕಾರಣಿಗಳೂ ಸೇರಿಕೊಂಡಿರುವುದು ವಿಶೇಷ! ಪಕ್ಷದ ಕಾರ್ಯಕರ್ತರಾಗಿ ಕೆಲಸ ಮಾಡ ಫುಲ್ ಟೈಮ್ ಪಾಲಿಟಿಕ್ಸಿನಲ್ಲಿ ಜೀವನ ಸವೆಸಿದ ನಾಯಕರುಗಳಿಗೆ ನೆಲದ ಮಾಲಿಕರ, ಗಣಿಯ ಧಣಿಗಳ ದುಡ್ಡು ನಿಜಕ್ಕೂ ನಡುಕ ಹುಟ್ಟಿಸಿದೆ. ರಾಜಕೀಯದಲ್ಲಿ ಹಣ ಹರಿಸುವುದು ಅಪರಾಧ ಎಂಬ ಜ್ಞಾನೋದಯ ತಡವಾಗಿ ಆಗುತ್ತಿದೆ.
ಹಳೆಯ ಕ್ಲೀಷೆ ಎಂಬಂತೆ ನಮ್ಮ ರಾಜಕೀಯದ ಬಗ್ಗೆ ಮಾತನಾಡುವಾಗಲೆಲ್ಲಾ ನನಗೆ ಇದಕ್ಕೆ ಬರೀ ರಾಜಕಾರಣ ಕಾರಣವಾ ಎಂಬ ಆಲೋಚನೆ ಬರುತ್ತದೆ. ಜನ ಸೇವೆ ಮಾಡುವುದಕ್ಕಾಗಿ ಇಂಥಾ ನೂಕು ನುಗ್ಗಲಾ ಎಂದು ನಾವು ಟಿಕೆಟ್‌ಗಾಗಿ ಜನ ಮುಗಿಬೀಳುವುದುನ್ನು ಅಣಕಿಸಬಹುದು ಆದರೆ ರೋಗಿಗಳ ‘ಸೇವೆ’ ಮಾಡುವುದಕ್ಕಾಗಿ ಲಕ್ಷಗಟ್ಟಲೆ ಸುರಿದು ವೈದ್ಯಕೀಯವನ್ನು ಅಭ್ಯಾಸ ಮಾಡುತ್ತಾರೆಯೇ? ಬೇರಾವ ಕ್ಷೇತ್ರದಲ್ಲೂ ಕೆರಿಯರ್‌ಗಿಂತ ಮುಖ್ಯವಾಗದ ಆದರ್ಶ, ನೈತಿಕ ಜವಾಬ್ದಾರಿಗಳನ್ನು ಕೇವಲ ರಾಜಕಾರಣಕ್ಕೆ ಆರೋಪಿಸುವುದು ಏತಕ್ಕೆ? ಅದನ್ನೂ ಒಂದು ಪ್ರೊಫೆಶನ್ ಆಗಿ ಕಾಣುವ ಕಾಲ ಬರುವುದು ಯಾವಾಗ? ಈ ವಿಚಾರದಲ್ಲಿ ನಾವಿನ್ನೂ ಸ್ವಾತಂತ್ರ್ಯ ಪೂರ್ವ ಯುಗದಲ್ಲಿದ್ದೇವೆ ಅನ್ನಿಸುತ್ತದೆ.
ಅಂಥಾ ಪ್ರಜ್ಞಾವಂತ, ಬುದ್ಧಿವಂತ ಮತದಾರರಿರುವ ಅಮೇರಿಕಾದಲ್ಲೇ ಕೌಬಾಯ್ ಜಾರ್ಜ್ ಬುಶ್ ತನ್ನ ದೇಶದ ಶಸ್ತ್ರಾಸ್ತ್ರ ತಯಾರಿಕೆಯ ಕಂಪೆನಿಗಳ ಶೇರು ಮೌಲ್ಯ ಹೆಚ್ಚಿಸಲು, ಅವುಗಳ ಆದಾಯ ಹೆಚ್ಚಿಸಲು ಇರಾಕಿನಲ್ಲಿ ಲಕ್ಷಾಂತರ ಮಂದಿ ಇರಾಕಿಗಳ, ಸಾವಿರಾರು ಅಮೇರಿಕನ್ ಯೋಧರ ಪ್ರಾಣದೊಂದಿಗೆ ಚೆಲ್ಲಾಟವಾಡುತ್ತರುವುದು ಭ್ರಷ್ಠಾಚಾರವಾಗಿ ಕಾಣಿಸುವುದಿಲ್ಲವಾ?
ಯಾಕೋ, ರಾಜಕೀಯವನ್ನು ಅಸಹ್ಯವಾಗಿ ಕಾಣುವುದು ನಾವೆಲ್ಲರೂ ನಮ್ಮೆಲ್ಲರ ನೈತಿಕ ಜವಾಬ್ದಾರಿಯನ್ನು ಪೂರೈಸಲಾಗದ ವಿಫಲತೆಯನ್ನು ಮುಚ್ಚಿಹಾಕಲು, ಆದರ್ಶಗಳನ್ನು ದಫನ್ನು ಮಾಡಿರುವುದನ್ನು ಮರೆಯಾಗಿಸಲು ಕಂಡುಕೊಂಡಿರುವ ಉಪಾಯ ಅನ್ನಿಸುತ್ತದೆ.

……………………

ರಗಳೆ ಬೊಗಳೆ -

“ಬೀದಿಪಾಲಾದವರ ಕಲ್ಯಾಣಕ್ಕಾಗಿ ರಸ್ತೆ ಅಗಲೀಕರಣ!”

ನಮ್ಮ ಕಲರವದಲ್ಲಿ ಕೋಲಾಹಲವೆಬ್ಬಿಸಲು ನೀವು ಓಡಿಸಿದ ರದ್ದಿಗಾರನನ್ನು ನಾವು ಹೆಚ್ಚಿನ ಅವಿದ್ಯಾಭ್ಯಾಸಕ್ಕಾಗಿ ಪರದೇಶಕ್ಕೆ ಅಟ್ಟಿದ್ದೇವೆ.

ಬೀದಿ ಅಗಲೀಕರಣದ ಬಗ್ಗೆ ಭಾವಿ ನಿಧಾನ ಮಂತ್ರಿ ಚಿರಯುವಕ ರಾಹುಳ ಹೇಳಿರುವುದು ಅತ್ಯಂತ ಸೂಕ್ತವಾಗಿದೆ. ಆದರೆ ಅವರ ಹೇಳಿಕೆಗೆ ಬೀದಿಪಾಲಾದ ಬೊಗಳೆ ಬ್ಯೂರೋದ ವರದ್ದಿಗಾರನಿಗೆ ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಲು ಹೆಮ್ಮೆ ಪಡುತ್ತೇವೆ.

ನಮ್ಮ ನಡುವಿನ ಗನ ಗಂಭೀರ ವ್ಯಕ್ತಿಗಳ, ಸಾ-ಯಿತಿಗಳ, ನಾಯಿ-ಕರ ‘ಮಾನ’ಗಳು ಬೀದಿಗೆ ಬೀಳುತ್ತಿರುವ ಸಂಗತಿ ಹೆಚ್ಚಾಗುತ್ತಿರುವುದು ಜಾಗತೀಕಾರಣದ ಬಾಟಮ್ ಎಫಕ್ಟ್ ಎಂಬುದನ್ನು ನಮ್ಮ ಸುದ್ದಿ ಚೋರರು ರಾಹುಳನಿಗೆ ಭಾಷಣ ಬರೆಯುವ ಪಿಎಗೆ ತಿಳಿಸಿದ್ದಾರೆ. ಕ್ಯಾತೆ ಕಾದ-ಅಂಬರಿ ಪ್ರಕರಣದಲ್ಲಿ ಸಾಹಿತಿ, ಕಾದಂಬರಿಕಾರ, ಡಿಬೇಟರುಗಳ ಮಾನ, ‘ಬರ್ಡ್ ಸಾಂಗ್’ನಲ್ಲಿ ವಿಗ್ಗೇಶ್ವರ ಕೃಷ್ಣ ಭಗವಾನ್ ಮಾನ ಹಾಗೂ ಮೊನ್ನೆ ಮೊನ್ನೆಯ ನೈಪಾಲ್ ಪ್ರಹಸನದಲ್ಲಿನ ಮಣಗಟ್ಟಲೆ ಮಾನಗಳೆಲ್ಲವೂ ಸೇರಿದಂತೆ ದೇಶದಲ್ಲಿ ಹೆದ್ದೆಚ್ಚು ಜನರ ಮಾನ -ಮರ್ಯಾದೆಗಳು ಬೀದಿಗೆ ಬೀಳುತ್ತಿರುವುದರಿಂದಾಗಿ ರಸ್ತೆ ಅಗಲೀಕರಣ ಅನಿವಾರ್ಯ ಎಂಬ ಉಪಾಯವನ್ನು ನಾವೇ ಸೂಚಿಸಿದ್ದು ಎಂದು ಹೇಳಲು ಸಂತೋಷಿಸುತ್ತೇವೆ.

ಈ ಮಾಹಿತಿಯಿಂದ ವಂಚಿತನಾದ ನಿಮ್ಮ ಬೀದಿಪಾಲು ಬ್ಯೂರೋದ ರದ್ದಿಗಾರನನ್ನು ಬೀದಿಪಾಲು ಮಾಡಿದರೆ ನಾವು ನಮ್ಮ ಸಂಸ್ಥೆಯ ಅಗಲೀಕೃತ ಬೀದಿಯಲ್ಲಿ ಅವರಿಗೆ ವಾಸ್ತವ್ಯ ಹೂಡಲು ಸಿದ್ಧರಿದ್ದೇವೆ.

……………………

ಕುಂಟಿನಿ-

ಆ ದಡ… ಈ ದಡ

>>>>ಆದರೆ ಯಾವುದು ಸತ್ಯ ಮತ್ತು ಯಾವುದು ಸುಳ್ಳು ಎಂಬುದನ್ನು ತೀರ್ಮಾನಿಸಬೇಕು ಎಂದು ಯಾರೂ ಅಷ್ಟೊಂದು ಹಠಕ್ಕೆ ಬಿದ್ದಂತೆ ಕಾಣುತ್ತರಲಿಲ್ಲ. >>>>
ತುಂಬಾ ಚೆನ್ನಾಗಿತ್ತು.

ಜೋಗಿ ಹೇಳುವ ಹಾಗೆ ನಮಗೆ ದಕ್ಕಿದಷ್ಟೇ ಕವಿತೆ ಎಂಬಂತೆ ಈ ಕಥೆಯೂ… ನನಗೆ ಈಗ ದಕ್ಕಿರುವಷ್ಟರ ಬಗ್ಗೆ ಸಂತೋಷವಿದೆ, ಇನ್ನೋ ಏನೋ ಇದೆ ಅದು ನನಗೆ ದಕ್ಕುತ್ತಿಲ್ಲ ಎನ್ನುವುದರ ಬಗ್ಗೆ ಅಸಮಾಧಾನವಿದೆ.

ಹೀಗೇ ಬರೆಯುತ್ತಿರಿ… ನಮ್ಮ ಓದುವ ಸಂತೋಷಕ್ಕಾಗಿ…

……………………

“ಹಣವೂ, ಹಸಿದ ಹೊಟ್ಟೆಗಳೂ, ಹಿಟ್ಲರನೂ ನೆನಪಾದಾಗ…”

ಹಣದುಬ್ಬರದ ಏರಿಕೆ ನಮ್ಮ ಮಾಧ್ಯಮಗಳಲ್ಲಿ ಏಕೆ ಗಂಭೀರ ಚರ್ಚೆಯ ವಿಷಯವಾಗಿಲ್ಲ? ಮೇಲ್ಮಧ್ಯಮ ವರ್ಗದವರಿಗೆ ಈ ಬೆಲೆಯೇರಿಕೆಯಿಂದಾಗಿ ಅಷ್ಟೇನೂ ಬಿಸಿ ತಟ್ಟದಿರುವುದರಿಂದಾಗಿ ಮಾಧ್ಯಮಗಳ ಗಮನ ಇತ್ತ ಹರಿದಿಲ್ಲವೇ? ಹಾಗಾದರೆ ಈ ಮಾಧ್ಯಮಗಳು ಪ್ರತಿನಿಧಿಸುವುದು ಯಾರನ್ನು?

ಹಳ್ಳಿಗಳಲ್ಲಿ ರೈತರಿಗೆ ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಪ್ರೋತ್ಸಾಹ ನೀಡಲಾಗುತ್ತಿದೆ.ಇದಲ್ಲದೆ ಆಹಾರ ಧಾನ್ಯಗಳಿಂದ ಸಿಕ್ಕುವ ಲಾಭಾಂಶವೂ ಕಡಿಮೆ. ಇದರಿಂದಾಗಿ ಆಹಾರ ಧಾನ್ಯಗಳ ಉತ್ಪಾದನೆಯು ಬೆಳವಣಿಗೆ ತಟಸ್ಥವಾಗಿದೆ. ದಿನೇ ದಿನೇ ಆಹಾರ ಧಾನ್ಯಗಳ ಬೆಲೆಯೇರಿಕೆ ಆಗುತ್ತಿದೆ. ಪೆನ್ ಡ್ರೈವು, ಐಪಾಡುಗಳು ದಿನೇ ದಿನೇ ಕಡಿಮೆ ಬೆಲೆಗೆ ಸಿಕ್ಕುತ್ತಿರುವುದನ್ನೇ ನೋಡಿ ನಾವು ಅಭಿವೃದ್ಧಿ ಹೊಂದಿದ್ದೇವೆ ಎಂದು ಬೀಗಬೇಕೆ?

ಯಾಕೋ ಗಾಬರಿಯಾಗುವುದು ಬಿಟ್ಟು ಬೇರೇನೂ ಮಾಡಲಾಗುತ್ತಿಲ್ಲ… ಇಂಥವುಗಳ, ದೇಶದ ಎಕಾನಮಿಯ ಬಗ್ಗೆ ನನ್ನ ಅಜ್ಞಾನವನ್ನು ನೆನೆಸಿಕೊಂಡರೆ ನಾಚಿಕೆಯೆನಿಸುತ್ತದೆ.

ಒಳ್ಳೆಯ ಲೇಖನ…

……………………

“ಹೊಗೇನಕಲ್, ಹಾಲಿವುಡ್ ಲಲನೆಯರು, ಸ್ಯಾಂಡಲ್ ವುಡ್ ಧೀರರು!”

ರವಿ ಸರ್,
ಕನ್ನಡ ನಾಡು ನುಡಿಯ ಬಗೆಗಿನ ಹೋರಾಟದ ವಿಚಾರ ಬಂದಾಗ ಕೇವಲ ಸಿನೆಮಾ ನಟರ ಬಗ್ಗೆ ಮಾತನಾಡುವುದೇಕೆ? ತಮಿಳು ಸಿನೆಮಾ ನಟರು ಹೋರ್ಆಟ ಮಾಡಿದರು ಎಂಬುದಕ್ಕೆ ಪ್ರತಿಯಾಗಿ ಇಲ್ಲೂ ಅಂಥ ಪ್ರತಿಭಟನೆ ನಡೆಯಬೇಕು ಎಂಬುದು ನಿಮ್ಮ ವಾದವೇ?

ಸಿನೆಮಾದ ನಾಯಕ ನಟರು ಹಾಗೂ ಕಲಾವಿದರೂ ಸಹ ತಮ್ಮ ಕ್ಷೇತ್ರದಲ್ಲಿ ದುಡಿಯುವ ಕಾರ್ಮಿಕರು. ಸಾಹಿತಿಗಳು, ಪತ್ರಕರ್ತರು, ನ್ಯಾಯವಾದಿಗಳು, ವೈದ್ಯರು, ಇಂಜಿನಿಯರುಗಳು, ನೀಲಕೇಣಿಗಳು, ನೈಸ್ ಖೇಣಿಗಳು ಮುಂತಾದವ್ರಿಗೆ ಇಲ್ಲದ ಜವಾಬ್ದಾರಿ ಕೇವಲ ಸಿನೆಮಾ ನಟರಿಗೆ ಮಾತ್ರ ಏಕೆ ಹೊರಿಸಬೇಕು?

ಇನ್ನು ಹಾಲಿವುಡ್ಡಿನ ನಟರ ಸಮಾಜ ಸೇವೆಯ ಬಗ್ಗೆ ಬರೆದಿರುವಿರಿ. ಪಮೇಲಾ ಆಂಡರ್ಸನ್ ಮಾದರಿಯ ‘ಸಮಾಜ ಸೇವೆ’ ನಮಗೆ ಬೇಕೆ? ಇಷ್ಟಕ್ಕೂ ಅವರು ಸಮಾಜಸೇವೆಗಾಗಿ ತಮ್ಮ ಖ್ಯಾತಿಯನ್ನು ಬಳಸಿಕೊಳ್ಳುತ್ತಿದ್ದಾರೆಯೇ ಅಥವಾ ಖ್ಯಾತಿಗಾಗಿ ಸಮಾಜ ಸೇವೆಯನ್ನೇ? ಇತ್ತೀಚೆಗೆ ಸಮಾಜ ಸೇವೆ ಎಂಬುದು ಸಹ ಫ್ಯಾಶನ್ ಆಗುತ್ತಿದೆ.

ಸಂದರ್ಶನವೊಂದರಲ್ಲಿ ಹಿಂದಿಯ ಐಟಂ ಗರ್ಲ್ ರಾಖಿ ಸಾವಂತ್ ತನಗೆ ಹೆಚ್ಚು ಹೆಚ್ಚು ಐಟಂ ಸಾಂಗುಗಳಲ್ಲಿ ಅವಕಾಶ ಕೊಡಬೇಕು. ಅದರಿಂದ ನಾನು ಸಮಾಜ ಸೇವೆ ಮಾಡಲು ಹೆಚ್ಚು ನೆರವಾಗುತ್ತದೆ ಎಂದು ಹೇಳಿದ್ದು ಈ ಸಂದರ್ಭದಲ್ಲಿ ನೆನಪಾಗುತ್ತದೆ.

………………………………………………………………

ನಾನು ಗ್ರಹಿಸಿರುವ ಸಂಗತಿಗಳ ಪ್ರಕಾರ, ನೈಪಾಲ್ (ನಾಯ್ ಪಾಲ್ ಅಲ್ಲ) ತಮ್ಮ ಸ್ವೇಚ್ಛೆ ಹಾಗೂ ಕಾಮುಕತನದಿಂದಾಗಿ ಹೆಂಡತಿಗೆ ಮಾನಸಿಕ ಕಿರುಕುಳ ಕೊಡುತ್ತಿದ್ದರು. ಹೆಂಡತಿಗೆ ತೋರಿಸಬೇಕಾದ ಕಾಳಜಿಯನ್ನು ತೋರಲಿಲ್ಲ. ವಿಪರೀತ ಸ್ವಾರ್ಥಿಯ ಹಾಗೆ ನಡೆದುಕೊಂಡರು. ಆಕೆಗೆ ವೆಡ್ಡಿಂಗ್ ರಿಂಗನ್ನು ಸಹ ಕೊಡಲಿಲ್ಲ. ಆಕೆ ಆಸ್ಪತ್ರೆಯಲ್ಲಿದ್ದಾಗ ವಿಪರೀತವಾಗಿ ಉಪೇಕ್ಷೆಯನ್ನು ತೋರಿದರು ಅವರ ಈ ಎಲ್ಲಾ ವರ್ತನೆಯಿಂದಾಗಿ ಪ್ಯಾಟ್ರಿಕ್ ಹೆಚ್ಚಿನ ಮಾನಸಿಕ ವ್ಯಾಧಿಯನ್ನನುಭವಿಸಿ ಅದರಿಂದಾಗಿಯೇ ಬೇಗ ಸಾವನ್ನು ಅಪ್ಪಿರಬಹುದು.

ತಮ್ಮ ಲೈಂಗಿಕ ಸಾಧನೆಗಳ ಬಗ್ಗೆ, ಗೋಡೆ ಹಾರುವ ಖಯಾಲಿಯ ಬಗ್ಗೆ ಸಾಕಷ್ಟು ನಿರ್ಭೀಡೆಯಿಂದಲೇ ಮಾತನಾಡಿ ಹೆಸರು ಮಾಡಿಕೊಂಡವರು ನೈಪಾಲ್ ಎಂಬುದು ಅವರನ್ನು ಗಮನಿಸುತ್ತಾ ಬಂದಿರುವವರಿಗೆ ತಿಳಿಯುತ್ತದೆ. ಹಾಗಾಗಿ ತಮ್ಮ ಆತ್ಮಕಥೆಯನ್ನು ಬರೆಸುವಾಗ ಯಾವುದನ್ನೂ ಮುಚ್ಚಿಟ್ಟುಕೊಳ್ಳದೆ ಆದರೆ ಸತ್ಯವನ್ನು ಮಾತ್ರ ಬರೆಯಬೇಕೆಂದು ಲೇಖಕ ಫ್ರೆಂಚ್‌ಗೆ ಹೇಳಿದ್ದಾರೆ.

ಇಲ್ಲಿ ನಾನು ಗಮನಿಸಿದ ಒಂದು ಅಂಶ. ನೈಪಾಲ್ ತಮ್ಮ ವೈಯಕ್ತಿಕ ಬದುಕಿನಲ್ಲಿನ ಅಸಡ್ಡೆ, ಹೆಂಡತಿಗೆ ತೋರುತ್ತಿದ್ದ ಅಲಕ್ಷ್ಯ (ಇದನ್ನು ಕಿರುಕುಳ ಎಂದರೆ ಬೇರೆಯೇ ಅರ್ಥ ಬರುತ್ತದೆ) ವನ್ನು ಮುಚ್ಚಿಟ್ಟುಕೊಂಡು ಚೆಂದದ, ಆರಿಸಿದ ನಿರಪಾಯಕಾರಿ ಸತ್ಯಗಳನ್ನು ಆಧರಿಸಿದ ಆತ್ಮಕಥೆಯನ್ನು ಬರೆಸಬಹುದಿತ್ತು. ಒಂದು ವೇಳೆ ಅವರು ಹಾಗೇ ಮಾಡಿದ್ದರೆ ನಮಗೆ ಅವರ ಕೃತಿಗಳ ಮೇಲಿನ ಗೌರವದಲ್ಲಿ ಬದಲಾವಣೆಯಾಗುತ್ತಿತ್ತೇ? ಹೀಗೆ ಯೋಚಿಸಿದರೆ ಆತನ ಕೃತಿಗಳನ್ನು ಈ ಚರ್ಚೆಯಿಂದ ಹೊರಗಿಡುವುದೇ ಸೂಕ್ತ ಎನ್ನಿಸುತ್ತದೆ.

ಈ ಪ್ರಸಂಗದಂತೆಯೇ ನನಗೆ ಇನ್ನೆರಡು ಸಂಗತಿಗಳು ನೆನಪಾಗುತ್ತಿವೆ. ಒಂದು: ಮೋಹನದಾಸ ಕರಮ ಚಂದ ಗಾಂಧಿ ತಮ್ಮ ಹೆಂಡತಿ ಕಸ್ತೂರ ಬಾಳಿಗೆ ಕೊಡುತ್ತಿದ್ದರೆನ್ನಲಾದ ಮಾನಸಿಕ ಹಿಂಸೆ. ತಮ್ಮ ಆದರ್ಶಗಳಿಂದಾಗಿ, ಹಠಮಾರಿತನದಿಂದಾಗಿ, ಮನೆಯಲ್ಲಿನ ಸರ್ವಾಧಿಕಾರಿ ಧೋರಣೆಗಳಿಂದಾಗಿ ಕಸ್ತೂರಬಾಗೆ ವಿಪರೀತ ಮಾನಸಿಕ ವೇದನೆಯಾಗುತ್ತಿತ್ತು ಎಂಬುದನ್ನು ಗಾಂಧೀಜಿ ತಮ್ಮ ಆತ್ಮಕಥೆಯಲ್ಲಿ ಬರೆದುಕೊಂಡಾಗ ಅವರ ಮೇಲೆ ಗೌರವ ಹೆಚ್ಚಾಗುತ್ತದೆಯೋ ಅಥವಾ ಕಡಿಮೆಯಾಗುವುದೋ? ಕಸ್ತೂರ ಬಾ ಆ ಬಗ್ಗೆ ಏನನ್ನೂ ಹೇಳಿಕೊಳ್ಳದಿದ್ದ ಕಾರಣ ನಮಗದು ಮುಖ್ಯವಾಗಿ ಕಾಣಿಸುವುದಿಲ್ಲವೋ?

ಇನ್ನೊಂದು ಉದಾಹರಣೆ: ಲಿಯೋ ಟಾಲ್ ಸ್ಟಾಯ್ ಮುಂತಾದ ಚಿಂತಕರು, ಲೇಖಕರು ತಮ್ಮ ಗಯ್ಯಾಳಿ ಹೆಂಡತಿಯರಿಂದ ಅನುಭವಿಸುತ್ತಿದ್ದ ಮಾನಸಿಕ ಕಿರುಕುಳ. ಈ ಚರ್ಚೆಯ ಬೆಳಕಿನಲ್ಲಿ ಅದನ್ನು ಹೇಗೆ ಗ್ರಹಿಸಲು ಸಾಧ್ಯ? ಹೆಣ್ಣಿನ ಸರ್ವಾಧಿಕಾರಿ ಮನೋಭಾವದಿಂದ, ಜಗಳಗಂಟತನದಿಂದ ಗಂಡಸಿಗೆ ಹೇಗೆ ತಾನೆ ಮಾನಸಿಕ ಕಿರುಕುಳ ಕೊಟ್ಟಂತಾದೀತು ಎನ್ನುವುದಾದರೆ, ಅದು ಅವರವರ ಸಂಸಾರಿಕ ಜೀವನದ ಸಂಗತಿಗಳು ಎನ್ನುವುದಾದರೆ ನೈಪಾಲ್‌ರನ್ನು ಏಕೆ ಖಳರನ್ನಾಗಿ ನೋಡುವುದು?

ಇನ್ನು, ನೈತಿಕತೆ, ನೈತಿಕ ಜವಾಬ್ದಾರಿ - ಕಲೆ-ಕಲಾವಿದ ಸಂಬಂಧಗಳ ಬಗ್ಗೆ ಮಾತನಾಡದಿರುವುದೇ ಮೇಲು. ಒಬ್ಬ ವ್ಯಕ್ತಿಯ ವೈಯಕ್ತಿಕ ಬದುಕನ್ನು ನಿರ್ದೇಶಿಸುವ ಹಕ್ಕು (ಅದು ಕಾನೂನನ್ನು ಉಲ್ಲಂಘಿಸದಿದ್ದರೆ) ಯಾರಿಗೂ ಇಲ್ಲ. ಇಲ್ಲಿ ಮಾಡಿದ್ದೆಲ್ಲವನ್ನೂ ಹೇಳಿಕೊಂಡು ದಕ್ಕಿಸಿಕೊಳ್ಳಬಲ್ಲೆ ಎಂಬ ನೈಪಾಲ್ ಉದ್ಧಟತನವನ್ನು ಪ್ರಶ್ನಿಸಬಹುದಾದರೂ, ಇದು ಅವರ ಪ್ರಾಮಾಣಿಕ ಪಶ್ಚಾತಾಪವೇ ಅಥವಾ ತಮ್ಮ ದೌರ್ಬಲ್ಯವನ್ನು ಸಮರ್ಥಿಸಿಕೊಳ್ಳುವ ಅರೋಗೆನ್ಸೇ ಎಂಬುದನ್ನು ತಿಳಿದವರು ಹೇಳಬೇಕು…

ಎಲ್ಲಕ್ಕಿಂತ ಮುಖ್ಯವಾಗಿ ನಾವು ಪತ್ರಿಕೆಗಳಲ್ಲಿ ಪ್ರಕಟವಾಗುವ, out of context ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಭಾವುಕವಾಗಿ ಮಾತನಾಡುವುದಕ್ಕೆ ತಡೆಹಾಕಿಕೊಳ್ಳಬೇಕು. ಅವರ ಆತ್ಮ ಕಥೆಯನ್ನು ಇಡಿಯಾಗಿ ಓದಿ ಅನಂತರ ಚರ್ಚಿಸಲಿಕ್ಕೆ ಇಳಿಯುವುದಾದಲ್ಲಿ ಚರ್ಚೆ ಸಹಕಾರಿಯಾದೀತು.

ಟೆಲಿಗ್ರಾಫ್ ಪತ್ರಿಕೆಯಲ್ಲಿ ಆ ಅತ್ಮಕಥೆಯನ್ನು ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದಾರಂತೆ… http://www.telegraph.co.uk/arts/main.jhtml?xml=/arts/2008/03/22/sm_naipaul22.xml

ಕನ್ನಡ ಬ್ಲಾಗುಗಳಲ್ಲಿ ವಿಹರಿಸುವವರಿಗೆ ಜೋಗಿಯವರ ಬ್ಲಾಗ್‍ನ ಪರಿಚಯ ಇದ್ದೇ ಇರುತ್ತದೆ. ಕನ್ನಡದಲ್ಲಿ ತುಂಬಾ ಸೊಗಸಾಗಿ, ಓದಲೇ ಬೇಕೆಂಬ ಪ್ಯಾಶನನ್ನು ಓದುಗರಲ್ಲಿ ಹುಟ್ಟಿಸುವ ಹಾಗೆ ಬರೆಯುವವರು ‘ಜೋಗಿ’. ತಮ್ಮ ಬ್ಲಾಗಿನಲ್ಲಿ ಇತ್ತೀಚೆಗೆ ಪ್ರಕಟಿಸಿರುವ ಅವರ ಒಂದು ಕತೆ ಅವರ ಬರವಣಿಗೆಯಲ್ಲಿನ ಲವಲವಿಕೆ, ನವಿರು ಹಾಸ್ಯ, ಏನನ್ನೂ ಹೇಳದೆ ಎಲ್ಲವನ್ನೂ ಹೇಳುವ, ಎಲ್ಲವನ್ನೂ ಹೇಳಿ ಏನನ್ನೂ ಹೇಳದ ಶೈಲಿಗೆ ಉದಾಹರಣೆ.

‘ಸಂದರ್ಶನ’ ಎಂಬ ಹೆಸರಿನ ಕಥೆಯಲ್ಲಿನ ಈ ಒಂದು ಮಾತುಕತೆಯನ್ನೇ ಗಮನಿಸಿ:

` ಇಲ್ಲ. ಇದರಲ್ಲೊಂದು ವೈಶಿಷ್ಟ್ಯ ಇದೆ. ನಾನೂ ನನ್ನ ಸೋದರನೂ ಅವಳಿ-ಜವಳಿ. ಒಬ್ಬ
ರಾಮಮೂರ್ತಿ ಇನ್ನೊಬ್ಬ ಕೃಷ್ಣಮೂರ್ತಿ. ಚಿಕ್ಕಂದಿನಲ್ಲಿ ಬಚ್ಚಲಮನೇಲಿ ಸ್ನಾನಕ್ಕೆ
ಮಲಗಿಸಿದ್ದಾಗ ಕೆಲಸದವಳ ತಪ್ಪಿನಿಂದಾಗಿ ಇಬ್ಬರೂ ಅದಲುಬದಲು ಆಗಿಬಿಟ್ವಿ.
ನಮ್ಮಿಬ್ಬರಲ್ಲಿ ಒಬ್ಬ ಸತ್ತುಹೋದ. ಸತ್ತೋನು ರಾಮಮೂರ್ತಿನಾ ಕೃಷ್ಣಮೂರ್ತಿಯಾ ಅಂತ
ಕರೆಕ್ಟಾಗಿ ಗೊತ್ತಿಲ್ಲ. ಕೆಲವರು ರಾಮಮೂರ್ತಿ ಅಂತಾರೆ, ಕೆಲವರು ನಾನು ಅಂತಾರೆ.

ಕಥೆಯ ಅಡಿಯಲ್ಲಿನ ಟಿಪ್ಪಣಿಯಲ್ಲಿ ಅವರು ಹೇಳಿದ ಮಾತುಗಳು ನಿಜಕ್ಕೂ ಕುತೂಹಲಕರವಾಗಿವೆ. ಅವರು ಹೇಳುವ ಹಾಗೆ ಕವಿತೆ, ಪದ್ಯದ ಹಾಗೆಯೇ ಈ ರೀತಿಯ ಬರಹಗಳೂ ಎಷ್ಟು ದಕ್ಕುತ್ತವೆಯೋ ಅಷ್ಟೇ ನಮ್ಮವು. ವಿಚಾರಗಳು ತುಂಬಾ ಸರಳವಾಗಿದ್ದಾಗಲೇ ನಾವು ವಿಪರೀತ ಗೊಂದಗೊಳ್ಳುವುದು, ಗಾಬರಿಯಾಗುವುದು. ಹೌದಲ್ಲವೇ?

ಕನ್ನಡದ ವಿಶಾಲದ ಬ್ಲಾಗುಗಳ ಲೋಕದಲ್ಲಿ ವಿಹರಿಸುವಾಗ ಎಡತಾಕುವ
ಬ್ಲಾಗುಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನೆಲ್ಲಾ
ಸಂಗ್ರಹಿಸಿಡುವ ಉದ್ದೇಶ ಈ ಲೇಖನಗಳದ್ದು. ಐದೈದೇ ಪ್ರತಿಕ್ರಿಯೆಗಳ ಗುಚ್ಚಗಳಿವು.

……………………………………………………………………….

ಬೊಗಳೆ ರಗಳೆ

ತಮ್ಮ ಮಾನ್ಯ ಅತ್ತೆಮ್ಮನವರಾದ ಹಿಂದ್ರಾ ಗಾಂಧಿಯವರ ಧ್ಯೇಯವಾಗಿದ್ದ ‘ಗರೀಬಿ ಹಠಾವೋ’ವನ್ನು ಈಗಿನ ಕಾಲಕ್ಕೆ ತಕ್ಕಂತೆ ಬದಲಾಯಿಸಿಕೊಂಡು ‘ಗರೀಬೋಂಕೊ ಹಠಾವೋ’ ಎಂದು ಘೋಷಿಸಿರುವ ಸೋಯಾ ಗಾಂಧೀಜಿಯವರು ನಮ್ಮ ದೇಶದ ಬೆಲೆಯನ್ನು ಈ ಮೂಲಕ ಏರಿಕೆ ಮಾಡುತ್ತಿದ್ದೇವೆ, ನಮ್ಮ ದೇಶ ಇಟಲಿಯಾಗುವುದು ಯಾವಾಗ ಎಂದು ನಮ್ಮ ವರದ್ದಿ ಗಾರರಿಗೆ ನೀಡಿದ ದಿಡೀರ್ ಸಂದರ್ಶನದಲ್ಲಿ ಬಾಯ್ಬಿಟ್ಟಿದ್ದಾರೆ. ನಿಧಾನ ಮಂತ್ರಿಯವರ ಹಿಂದೆ ಅಲೆಯುತ್ತಿದ್ದ ನಿಮ್ಮ ನಿಧಾನ ಮತಿ ರದ್ದಿಗಾರನಿಗೆ ಈ ಸುದ್ದಿ ಸಿಕ್ಕಿಲ್ಲವೆಂದು ತಿಳಿಸಲು ಹರ್ಷಿಸುತ್ತೇವೆ.

………………………………

ಬೊಗಳೆ

ಅಸತ್ಯ ಅನ್ವೇಷಿಯವರನ್ನು ಬೊಗಳೂರಿನಿಂದಲೇ ಓಡಿಸಿರುವುದರ ಹಿಂದೆ ನಮ್ಮ ಸಂಸ್ಥೆಯ ಕೈವಾಡವಾಗಲೀ ಮುಖವಾಡವಾಗಲೀ ಇಲ್ಲ ಎಂದು ಈ ಮೂಲಕ ಸಾರುತ್ತಿದ್ದೇವೆ.
ಯಾರಾದರೂ ಅಸತ್ಯ ಅನ್ವೇಷಿ ಬೊಗಳೂರಿನಿಂದ ಕಾಣೆಯಾಗಿರುವುದಕ್ಕೆ ಆಗಿರುವ ಅದಮ್ಯ ಸಂತೋಷವನ್ನು ಪಟಾಕಿ ಹಾರಿಸುವ ಮೂಲಕವೋ, ಸಿಹಿ ಹಂಚುವ ಮುಖಾಂತರವೋ ತೋರ್ಪಡಿಸಿದಲ್ಲಿ ನಮ್ಮ ಮಾಜಿ ‘ಮಣ್ಣಿನ ಮಗ’ನಂತೆ ಬೊಗಳೂರಿನಲ್ಲಿ ಮತ್ತೆ ಹುಟ್ಟದಿರುವ ಶಪಥ ಮಾಡಿಯಾರು ಜೋಕೆ!

………………………………

ಅಮೇರಿಕೆಯಿಂದ ಅವಲೋಕಿಸುತ್ತಾ

ಈ ಬಗೆಯ ಬ್ರೇನ್ ವಾಶಿಂಗ್ ಎಲ್ಲಾ ಕಾಲದಲ್ಲೂ ನಡೆಯುತ್ತಲೇ ಇದೆ. ಬೇರೆ ಬೇರೆಯ ಹೆಸರುಗಳಲ್ಲಿ.

ನನ್ನ ಅನುಭವದ ಆಧಾರದಲ್ಲಿ ಹೇಳುವುದಾದರೆ, ನಾನು ಪ್ರೈಮರಿ ಹಾಗೂ ಹೈಯರ್ ಪ್ರೈಮರಿಯನ್ನು ಓದಿದ್ದು ಸತ್ಯ ಸಾಯಿ ಬಾಬಾ ಭಕ್ತ ಸಂಘವೊಂದು ನಡೆಸುತ್ತಿದ್ದ ಶಾಲೆಯಲ್ಲಿ. ಅಲ್ಲಿದ್ದಾಗ ವಿದ್ಯಾರ್ಥಿಗಳಾದ ನಮ್ಮ ನಮ್ಮಲ್ಲೇ ಯಾರು ಹೆಚ್ಚು ಭಕ್ತಿಯನ್ನು ತೋರುತ್ತಾರೋ ಎಂದು ಸ್ಪರ್ಧೆ ನಡೆಯುತ್ತಿತ್ತು. ನಮಗೆ ಬೌದ್ಧಿಕವಾಗಿ, ವೈಚಾರಿಕವಾಗಿ ಸಿಗುತ್ತಿದ್ದ ಮಾಹಿತಿಯೆಲ್ಲಾ ಸಾಯಿ ಬಾಬಾ ಕುರಿತಾದದ್ದೇ, ಅವರ ಪವಾಡಗಳನ್ನು ಕುರಿತಾದದ್ದೇ. ಮೌಲ್ವಿ ಪ್ರಕೃತಿ ಸಹಜವಾಗಿ ಕಾಮ ಕೆರಳುವ ಯೌವನದ ಹೊಸ್ತಿಲಲ್ಲಿರುವ ಯುವಕರಿಗೆ ಕನ್ಯೆಯರ ಆಸೆ ತೋರಿಸಿದ ಹಾಗೆಯೇ ನಮಗೆ ‘ನೀವು ಭಕ್ತಿಯಿಂದ ಪ್ರಾರ್ಥಿಸಿದರೆ ಪರೀಕ್ಷೆಯಲ್ಲಿ ಫರ್ಸ್ಟ್ ರ್ಯಾಂಕ್ ಬರಬಹುದು.’ ಅಂತ ಹೇಳಿ ತಾವೇ ಸೃಷ್ಠಿಸಿದ್ದೋ ಇಲ್ಲವೇ ಯಾರೋ ಹೇಳಿದ್ದೋ ಸಾಯಿ ಬಾಬಾ ಪವಾಡದ ಕಥೆಯನ್ನು ಹೇಳುತ್ತಿದ್ದರು. ಆ ವಯಸ್ಸಿನಲ್ಲಿ ಅದನ್ನು ಎಷ್ಟು ಆಳವಾಗಿ ನಂಬುತ್ತಿದ್ದೆವೆಂದರೆ, ನಿಜಕ್ಕೂ ಚೆನ್ನಾಗಿ ಓದಿ ಫರ್ಸ್ಟ್ ರ್ಯಾಂಕ್ ಬಂದವನಿಗೂ ಸಹ ಬಾಬಾ ಪವಾಡದಿಂದಲೇ ತಾನು ರ್ಯಾಂಕ್ ಗಳಿಸಿರಬೇಕು ಎನ್ನಿಸುತ್ತಿತ್ತು. ತಮ್ಮ ಸಾಮರ್ಥ್ಯದ ಮೇಲೆ ಮಕ್ಕಳು ಇಲ್ಲವೇ ಯುವಕರು ನಂಬಿಕೆ ಕಳೆದುಕೊಳ್ಳುವುದು ಹೀಗೇ ಅಲ್ಲವೇ?

ನನ್ನ ಅದೃಷ್ಠಕ್ಕೆ ನಾನು ಹೈ ಸ್ಕೂಲ್ ಸೇರಿದಾಗ ನನಗೆ ಸಿಕ್ಕ ಅತ್ಯಂತ ಮುಕ್ತವಾದ ವಾತಾವರಣ ನನ್ನ ಬ್ರೈನಿಗೆ ಅಳಿಸಲಾಗದಷ್ಟು ವೆರೈಟಿಯ ವಿಚಾರಗಳನ್ನು ತುಂಬಿ ಯಾರೂ ವಾಶ್ ಮಾಡಲಾಗದ ಹಾಗೆ ಮಾಡಿತು. ಕೆಲವು ದಿನ ನಾಸ್ತಿಕವಾದದ ಹಿಂದೆ ಬಿದ್ದು ದೇವರೆಲ್ಲಿದ್ದಾನೆ ತೋರಿಸು ಅಂತ ಅಮ್ಮಂಗೆ ಹೇಳಿ ಆಕೆ ಕಣ್ಣಿರು ಹಾಕುವಂತೆ ಮಾಡಿದ್ದೆ. ಕೆಲವು ಕಾಲ ವೇದಗಳಲ್ಲಿ ಜಗತ್ತಿನ ರಹಸ್ಯವಿದೆ ಎಂದು ನಂಬಿಕೊಂಡು ಭ್ರಾಂತನಾಗಿ ಅಲೆದೆ ಆದರೆ ಅಲ್ಲಿನ ವಾತಾವರಣದಲ್ಲಿ ನನಗೆ ಯಾವ ವಿಚಾರಕ್ಕೂ ಸಂಘಟನೆಯ ಆಸರೆ ದೊರೆಯಲಿಲ್ಲ. ಆಗ ರೂಢಿಯಾದ ನನ್ನ ವೈಚಾರಿಕ ಅಲೆಮಾರಿತನದಿಂದಾಗಿ ನಾನು ಮತ್ತೆ ಪಿಯುಗಾಗಿ ಸಾಯಿ ಬಾಬಾರ ನೇರ ಒಡೆತನದಲ್ಲಿರುವ ಅಳಿಕೆಯ ಕಾಲೇಜಿಗೆ ಹೋದರೂ ನನ್ನತನವನ್ನು ಕಳೆದುಕೊಳ್ಳಲಿಲ್ಲ.

ನಿಮ್ಮ ಲೇಖನ ನನ್ನಲ್ಲಿ ಎಬ್ಬಿಸಿದ ನೆನಪುಗಳ ಚಿತ್ರಣವನ್ನು ಇಲ್ಲಿ ಬರೆದೆ. ತೀರಾ ವೈಯಕ್ತಿಕ ತುತ್ತೂರಿ ಎನ್ನಿಸಿದರೆ ತೆಗೆದು ಹಾಕಿ.

ಒಳ್ಳೆಯ ಲೇಖನ ಹಾಗೆಯೇ ಅಣಕ ಕೂಡ. ಕೂಲಿಂಗ್ ಗ್ಲಾಸಿನ ಮಹಿಮೆ ಮಸ್ತಾಗಿದೆ!

………………………………

ಅಮೃತ ಸಿಂಚನ

ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ. ಕಾರ್ಯಕ್ರಮಗಳು, ಹೊಸ ಜಾಗಕ್ಕೆ ಹೋಗುವುದು ಎಂದರೆ ಸಂಕೋಚದ ಮುದ್ದೆಯಾಗುವ ನನಗೆ ತಿಂಗಳಿಗೊಮ್ಮೆ ಇರುವ ಡೆಂಟಿಸ್ಟ್ ಅಪಾಯ್ಟ್ ಮೆಂಟನಿಂದ ಹೇಗೆ ತಪ್ಪಿಸಿಕೊಳ್ಳುವುದು ಎಂಬ ಚಿಂತೆ ಹತ್ತಿರುತ್ತದೆ. ಇದೋಂದೇ ಕಾರಣದಿಂದಾಗಿ ನಾನು ಕಾರ್ಯಕ್ರಮಕ್ಕೆ ಹೋಗಲಿಲ್ಲ.

ಬ್ಲಾಗಿನಲ್ಲಿ ಸಿಕ್ಕ ಅರೆ ಬರೆ ವರದಿ, ಅಭಿಪ್ರಾಯಗಳ ಆಧಾರದಲ್ಲಿ ನಾನು ಕಾರ್ಯಕ್ರಮದ ಬಗ್ಗೆ ತಿಳಿದುಕೊಂಡೆ. ಈಗ ನಾನೂ ಹೋಗಬೇಕಿತ್ತು ಎನ್ನಿಸುತ್ತಿದೆ!(ಪ್ರತಿ ಅಪಾಯಿಂಟ್ ಮೆಂಟ್ ಮಿಸ್ ಮಾಡಿಕೊಂಡಾಗಲೂ ನನಗೆ ಹೀಗೇ ಅನ್ನಿಸುತ್ತದೆ!)

ಬ್ಲಾಗ್ ಎಂದರೇನೇ ಸಾರ್ವಜನಿಕ ಪರ್ಸನಲ್ ಡೈರಿ… ನಮಗೆ ಬೇಕಾದ್ದನ್ನು ಬರೆಯಬಹುದು ನಾವಿಲ್ಲಿ, ಡೈರಿಯಲ್ಲಿ ಬರೆದುಕೊಂಡಂತೆ. ಆದರೆ ಅದೊಂದೇ ಉದ್ದೇಶವಾಗಿದ್ದರೆ ಅದನ್ನು ಅಂತರ್ಜಾಲದಲ್ಲಿ ಪ್ರಕಟಿಸುವ ಹಂಬಲವೇಕೆ? ಸುಮ್ಮನೆ ಡೈರಿಯಲ್ಲಿ ಗೀಚಿಟ್ಟುಕೊಳ್ಳಬಹುದಲ್ಲವಾ, ಇಲ್ಲವೇ ಟೈಪಿಸಿ ಕಂಪ್ಯೂಟರಿನಲ್ಲಿ ಇಟ್ಟುಕೊಳ್ಳಬಹುದಲ್ಲವಾ? ಇದೆಲ್ಲವನ್ನೂ ಬಿಟ್ಟು ಯಾಕೆ ನಾವುಗಳು ಡೈರಿಯ ಪುಟಗಳಿಗೆ ಅರ್ಹವಾದ ವೈಯಕ್ತಿಕ ಅಭಿಪ್ರಾಯಗಳನ್ನು ಬ್ಲಾಗಿನ ಕಟ್ಟೆಯ ಮೇಲೆ ತಂದಿಡುತ್ತೇವೆ? ನಮ್ಮ ಪ್ರತಿ ವೈಯಕ್ತಿಕ ಅಭಿಪ್ರಾಯಕ್ಕೂ ಸಾಮಾಜಿಕ ಆಯಾಮ ಇದೆ ಎಂಬ ಕಾರಣಕ್ಕಾಗಿ ಅಲ್ಲವೇ? ಹೀಗೆ ಸಾಮಾಜಿಕ ಆಯಾಮವನ್ನು ಒಪ್ಪಿಕೊಂಡ ಮೇಲೆ ನಮ್ಮ ವೈಯಕ್ತಿಕ ಅಭಿಪ್ರಾಯಕ್ಕೆ ಒಂದು ಸಭ್ಯತೆ, ಒಂದು ನಿಯಂತ್ರಣ ಲಭ್ಯವಾಗಬೇಕು ಅಲ್ಲವೇ? ಇವೆಲ್ಲಾ ಒತ್ತಾಯದ ರೂಲುಗಳಲ್ಲ, ‘ನಿನ್ನ ಬಾಯಲ್ಲಿರುವ ಎಲೆ ಅಡಿಕೆಯ ರಸವನ್ನು ಅಲ್ಲಿ, ಡಸ್ಟ್ ಬಿನ್ನಿನಲ್ಲಿ ಉಗುಳಪ್ಪಾ…’ ಎಂಬ ಮೆಲುದನಿಯ ಪಿಸುಮಾತು. ‘ಇಲ್ಲ, ಇದು ನನ್ನ ಬಾಯಿ ನನ್ನ ಎಲೆ ಅಡಿಕೆ, ರಸ್ತೆ ಸಾರ್ವಜನಿಕವಾದದ್ದು. ನಾನು ಉಗುಳುವುದು ನಿಮ್ಮ ಪಂಚೆ, ಶರ್ಟಿನ ಮೇಲೆ ಸಿಡಿದರೆ, ಅದರಿಂದ ನಿಮಗೆ ಕೋಪ ಬಂದರೆ ನೀವು ಅನಾಗರೀಕರು’ ಎಂದು ತಾವಂದರೆ ಅದಕ್ಕೆ ಪಿಸುಮಾತಿನ ಪ್ರತಿಕ್ರಿಯೆ ಸಿಕ್ಕುವುದಿಲ್ಲ.

ನೀವು ಅದೆಷ್ಟು ಹಾಸ್ಯ ಪೂರಿತವಾಗಿ, ರಸವತ್ತಾಗಿ ‘ಯಾವ ವೈಯಕ್ತಿಕ ನಂಜೂ’ ಇಲ್ಲದೆ ಬೋಳುತಲೆಯವರ ಬಗ್ಗೆ, ಮೊಬೈಲಿನಲ್ಲಿ ಗಾಳ ಹಾಕುತ್ತಿರುವವರ ಬಗ್ಗೆ ಬರೆದಿದ್ದೀರೋ ಅದೇ ಸಲುಗೆಯಲ್ಲಿ, ಅದೇ ಹಾಸ್ಯದ ನೆಲೆಯಲ್ಲಿ ನಿಮಗೆ ಪ್ರತಿಕ್ರಿಯೆಗಳು ಬಂದಿವೆ. ನಿಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎಂಜಾಯ್ ಮಾಡಬಯಸುವ ತಾವು ಅನೇಕ ಪ್ರತಿಕ್ರಿಯೆಗಳನ್ನು ಡಿಲೀಟ್ ಮಾಡಿರುವುದು ಏಕೋ ಕಾಣೆ!

………………………………

ಓ ನನ್ನ ಚೇತನಾ

ಎಲ್ಲರೂ ಮಳೆಗಾಲವೆಂದರೆ ನೆನಪಿನ ಕಾಲ ಎನ್ನುವುದ ಕೇಳಿದ್ದೇನೆ. ಆದರೆ ಯಾವ ಕಾಲದಲ್ಲಿ ನೆನಪಿಲ್ಲಾ ಹೇಳು? “ಮಿಂಚಾಗಿ ನೀನು ಬರಲು…” ಹಾಡಿನ ಹಾಗೇ. ತೀರ್ಥಹಳ್ಳಿಯ ಮಳೆಗಾಲ ನೆನಪುಗಳನ್ನು ಮಲೆನಾಡಿಗರಿಗೆ ಒತ್ತರಿಸಿ ತರುವ ಹಾಗೆಯೇ ನನ್ನ ದಾವಣಗೆರೆಯ ಬಿರು ಬಿಸಿಲಿನ ಮಧ್ಯಾನ ನನ್ನನ್ನು ನಾಸ್ಟಾಲ್ಜಿಕ್ ಆಗಿಸುತ್ತದೆ.

ಮಳೆಗಾಲವೆಂದರೆ, ಚಳಿಗಾಲವೆಂದರೆ ನನಗೆ ಹಿಂಸೆ. ಏಳು ತಿಂಗಳಿಗೇ ಅವಸರದಲ್ಲಿ ಹುಟ್ಟಿದವನಾದ್ದರಿಂದ ನನ್ನ ದೇಹ ಪ್ರಕೃತಿ ವಿಪರೀತ ಸೂಕ್ಷ್ಮದ್ದಾಗಿತ್ತು. ಸ್ವಲ್ಪ ಚಳಿ ಕಿವಿಯೊಳಗೆ ಹರಿದರೆ ಮೂಗಲ್ಲಿ ನಯಾಗರ! ತಲೆಯ ಮೇಲೆ ಒಂದು ಹನಿ ನೀರು ಬಿದ್ದರೆ ಸಾಕು ಮೈಯೊಳಗೆ ಜ್ವರದ ಬಿಸಿ. ಹೀಗಿರುವಾಗ ಮಳೆಯ ನೀರಲ್ಲಿ ದಾವಣಗೆರೆಯ ಕಪ್ಪು ಮಣ್ಣು ನೆನೆದು ಕಂಪುಬೀರುವುದನ್ನು ಸವಿಯುವುದಕ್ಕಿಂತ ಹೆಚ್ಚಾಗಿ ನನಗೆ ಮನೆಯಲ್ಲಿ ಬಟ್ಟೆಗಳು ಹೆಚ್ಚಿನ ತೇವಾಂಶದಲ್ಲಿ ಮುಗ್ಗು ವಾಸನೆ ಹೊತ್ತುಕೊಂಡಿರುತ್ತಿದ್ದದ್ದು ಹಿಂಸಿಸುತ್ತಿತ್ತು.

………………………………………………………………

Technorati Tags: , , ,

ನಮ್ಮ ನಡುವಿನ ಎಡ-ಬಲದ ಬಾಧೆಯ ಬಗ್ಗೆ ಮತ್ತೆ ಮಾತನಾಡೋಣ ಬಿಡಿ. ಈ ಧಾರ್ಮಿಕತೆ, ವೈಯಕ್ತಿಕ ನಂಬಿಕೆಗಳ ಬಗೆಗಿನ ಮನುಷ್ಯನ ಆಸಕ್ತಿ ಕಾಲ, ದೇಶಗಳು ಬದಲಾದರೂ ಮಾಸುವುದಿಲ್ಲ.

ಇಲ್ಲೊಂದು ಪೋಸ್ಟ್ ಇದೆ ಓದಿ. ಈ ಬ್ಲಾಗಿನ ಲೇಖಕ ಒಬ್ಬ ವ್ಯಂಗ್ಯ ಚಿತ್ರಕಾರ. ಆತನ ಹೆಸರು ಸ್ಕಾಟ್ ಆಡಮ್ಸ್. ತನ್ನ ಕಾರ್ಟೂನುಗಳಲ್ಲಿ ಧರ್ಮವನ್ನು, ಚರ್ಚನ್ನು ಸಾಕಷ್ಟು ಜಾಡಿಸುತ್ತಾನೆ. ಆದರೆ ಯಾರಾದರೂ, ‘ನೀನು ಇದೇ ಕೆಲಸವನ್ನು ಮುಹಮ್ಮದ್ ಬಗ್ಗೆ ಮಾಡಿ ನೋಡು ತಾಕತ್ತಿದ್ದರೆ’ ಎಂದು ನಮ್ಮ ಫೈರ್ ಬ್ರಾಂಡ್ ಪತ್ರಕರ್ತ ಕಮ್ ಅಂಕಣಕಾರರ ರೀತಿಯಲ್ಲಿ ಕೇಳಿದಾಗ ತೀರಾ ಪ್ರಾಮಾಣಿಕವಾಗಿ ‘ನಾನು ಸಾವಿಗಿಂತ ಹೆಚ್ಚಾಗಿ ಬದುಕನ್ನು ಪ್ರಿಫರ್ ಮಾಡುತ್ತೇನೆ’ ಎನ್ನುತ್ತಾನೆ. ನಮ್ಮ ಕೆಲವು ಬುದ್ಧಿಜೀವಿಗಳ ಹಾಗೆ ತಿಪ್ಪೆ ಸಾರಿಸುವುದಿಲ್ಲ.

ಆತನಿಗೆ ಒಂದು ಕಾರ್ಟೂನ್ ಸಂಬಂಧವಾಗಿ ಬಂದ ಸಹಸ್ರಾರು ಇ-ಮೇಲುಗಳಲ್ಲಿ ಒಂದು ಮೇಲು ಆಕರ್ಷಕವಾಗಿ ಕಂಡು ಅದನ್ನು ಪ್ರಕಟಿಸಿದ್ದಾನೆ. ಆ ಮೇಲ್ ಕಳುಹಿಸಿದವಳ ವಾದ ಸರಣಿಯನ್ನು ಓದಿ ನನಗೆ ನಗೆ ತಡೆಯಲಾಗಲಿಲ್ಲ. ನಂಬಿಕೆಗಳ ವಿಚಾರ ಬಂದಾಗ ಹಿಂದುಗಳಿಗಿರುವ ಅನೇಕಾನೇಕ ಕನ್ ಫೂಶನ್‌ಗಳೇ ವರವೆಂದು ಕಾಣುತ್ತವೆ. ಇಲ್ಲವಾದಲ್ಲಿ ಆಕೆಯಂತೆಯೇ ನಾವೂ ನಿಚ್ಚಳವಾಗಿ ಮಾತನಾಡುತ್ತಿದ್ದೆವೇನೋ!

ಆಕೆಯ ಪತ್ರವನ್ನು ಆ ಬ್ಲಾಗಿಗನ ಅನುಮತಿ ಇಲ್ಲದೆ ಇಲ್ಲಿ ಎತ್ತಿ ಹಾಕಿದ್ದೇನೆ:

In a message dated 3/11/2008 9:54:25 P.M. Pacific Daylight Time, (address deleted) writes:

Hello! Mr. Adams,
Mr. Adams I just want to tell you that I don’t
really appreciate you making a mockery of my faith. I used to think
that your comic strip was funny, now I think it is very disgusting and
not funny at all. I have found your last comics strips in reference to
my Lord and Savior Jesus Christ very offensive. There is a place for
everything and there is a place for humor and humor has its limits,
especially when it comes to those things and issues that some of us
hold as sacred. I will pray for you and that some day you may come to
know Jesus as your Lord and Savior. Otherwise you will find Him some
day as your judge, and He will justly judge you for your sins and
whether or not you believe in Hell that day you will believe and you
will repent when you see Him face to face, but then it will be too
late. Repent from your wicked ways and stop making fun of my Savior.

Thanks for your time.

Pastor (name deleted).
California

‘ವಿಕ್ರಾಂತ ಕರ್ನಾಟಕ’ ಎಂಬ ವಾರ ಪತ್ರಿಕೆ ಕನ್ನಡದಲ್ಲಿ ಹೊರ ಬರುತ್ತಿರುವ ಅನೇಕ ವಾರಪತ್ರಿಕೆಗಳಲ್ಲಿ ವಿಶಿಷ್ಟವಾದದ್ದು. ‘ಹಾಯ್ ಬೆಂಗಳೂರ್!’ , ‘ಲಂಕೇಶ್’ ಮುಂತಾದ ಟ್ಯಾಬ್ಲಾಯ್ಡ್ ಪತ್ರಿಕಗಳಲ್ಲಿಲ್ಲದ ಸಾಂಸ್ಕೃತಿಕ ಸೊಗಡು ಹಾಗೂ ತರಂಗ, ಸುಧಾದಂತಹ ಕೌಟುಂಬಿಕ ವಾರಪತ್ರಿಕೆಗಳಲ್ಲಿಲ್ಲದ ರಾಜಕೀಯ ವಿಶ್ಲೇಷಣೆಯನ್ನು ಹೊತ್ತು ವಾರ ವಾರ ಹೊರಬರುತ್ತಿರುವ ‘ವಿಕ್ರಾಂತ ಕರ್ನಾಟಕ’ದಲ್ಲಿ ಡಿ.ಎಸ್. ನಾಗಭೂಷಣ್ ನಿಯಮಿತವಾಗಿ ಅಂಕಣ ಬರಹ ಬರೆಯುತ್ತಾರೆ. ನಮ್ಮ ನಡುವೆ ಇರುವ ಕೆಲವೇ ಗಂಭೀರ ಚಿಂತಕರಲ್ಲಿ ಒಬ್ಬರಾದ ನಾಗಭೂಷಣ್ ತಮ್ಮ ವೈಚಾರಿಕತೆಯ ನಡುವೆ ಅನವಶ್ಯಕವಾದ ಸಿನಿಕತೆ ಸುಳಿಯದ ಹಾಗೆ ನೋಡಿಕೊಂಡು, ಜೀವನೋತ್ಸಾಹವನ್ನು ಉಳಿಸಿಕೊಂಡಿರುವುದಕ್ಕೆ ಅವರ ಬರಹಗಳು ನನಗೆ ಇಷ್ಟವಾಗುತ್ತವೆ.

ಭಾರತದ ಕ್ರಿಕೆಟ್ ಪ್ರಹಸನದಲ್ಲಿ ನಡೆಯುತ್ತಿರುವ ಕೋಟಿ ಕೋಟಿ ರೂಪಾಯಿಗಳ ಮಾತು, ಮಾಧ್ಯಮಗಳು ಅವನ್ನು ವೈಭವೀಕರಿಸಿ ನಮಗೆ ಮುಟ್ಟಿಸುತ್ತಿರುವ ರೀತಿ, ಹಾಗೂ ನಾವುಗಳು ಅದಕ್ಕೆ ವ್ಯಕ್ತ ಪಡಿಸುತ್ತಿರುವ ಹುಸಿ ಸಂಭ್ರಮಗಳನ್ನು ತಮ್ಮ ಇತ್ತೀಚಿನ ಲೇಖನವೊಂದರಲಿ ಪ್ರಸ್ತಾಪಿಸಿದ್ದಾರೆ.

ಆಸ್ಟ್ರೇಲಿಯಾದಲ್ಲಿನ ನಮ್ಮ ಕ್ರಿಕೆಟ್ ವಿಜಯ ನಿಜವಾಗಿಯೂ ನಮ್ಮೆಲ್ಲರಿಗೆ ಹೆಮ್ಮೆ ಹಾಗೂ
ಸಂತೋಷ ತಂದಿದೆ. ಆದರೆ ಇದು ನಿಜವಾಗಿಯೂ ಇವರೆಲ್ಲ - ಅಂದರೆ ಕ್ರಿಕೆಟ್ ಆಡಳಿತಗಾರರು
ಹಾಗೂ ಮಾಧ್ಯಮದವರು - ಸಂಭ್ರಮಿಸುತ್ತಿರುವ ಪ್ರಮಾಣದ ರಾಷ್ಟ್ರೀಯ ಮಹತ್ವ ಹೊಂದಿದೆಯಾ?
ಯಾಕೆ ಹೀಗೆ ಆಟಗಾರರಿಗೆ, ತರಬೇತಿದಾರರಿಗೆ, ಆಯ್ಕೆದಾರರಿಗೆ ಕೋಟಿ ಕೋಟಿ ರೂಪಾಯಿಗಳ
ಹಣವನ್ನು ಎರಚಲಾಗುತ್ತಿದೆ? ಇವರು - ಈಚೆಗೆ ವಿಶ್ವ ಕಪ್ ಗೆದ್ದು ಬಂದ ಕಿರಿಯರ
ಕ್ರಿಕೆಟ್ ತಂಡವೂ ಸೇರಿದಂತೆ - ಪ್ರದರ್ಶಿಸುತ್ತಿರುವ ಕ್ರಿಕೆಟ್ ಸಾಮಥ್ರ್ಯ, ನಮ್ಮ ಜನರ
ಇತರೇ ಯಾವುದೇ ತೆರೆನ ಸಾಮಥ್ರ್ಯಕ್ಕಿಂತ ಅಷ್ಟು ಅಮೂಲ್ಯವಾಗಿದೆಯೇ? ಭಾರತದ ಒಬ್ಬ
ಸಾಮಾನ್ಯ ಪ್ರಜೆ ಜೀವನ ಪೂರ್ತಿ ದುಡಿದೂ ಉಳಿತಾಯ ಮಾಡಲಾಗದಷ್ಟರ ಹಲವು ಪಟ್ಟು ಹಣವನ್ನು
ಈ ಆಟಗಾರರಿಗೆ ಒಂದು ಪಂದ್ಯಾವಳಿಯನ್ನು ಗೆದ್ದುದಕ್ಕೆ ಏಕೆ ಕೊಡಲಾಗುತ್ತಿದೆ? ಯಾರ ಹಣ
ಅದು? ಯಾವ ಆರ್ಥಿಕತೆ ಇದು? ಇಂತಹ ಪ್ರಶ್ನೆಗಳು ಏಳದಂತೆ ಜನರನ್ನು ಮಾರುಕಟ್ಟೆ
ರೋಚಕತೆಯಲ್ಲಿ ಮುಳುಗಿಸಿ ಅವರ ವೈಚಾರಿಕತೆಯನ್ನು ನಾಶ ಮಾಡುವುದೇ ಜಾಗತಿಕ ಅರ್ಥಿಕತೆಯ
ಗುರಿ ಮತ್ತು ಮಾರ್ಗಗಳೆರಡೂ ಆಗಿವೆ.

ಭಾರತ ಕ್ರಿಕೆಟ್‌ನಲ್ಲಿ ಏರಿರುವ ಎತ್ತರವನ್ನು ಮೆಚ್ಚಿಕೊಳ್ಳಬೇಕಾದ್ದು, ಆಟಗಾರರನ್ನು ನಾವು ಪ್ರೀತಿಸಬೇಕಾದ್ದು ಸಹಜವೇ ಆದರೆ ಅದೇ ನಮ್ಮಿಡೀ ಐಡೆಂಟಿಟಿಯಾಗಬಾರದಲ್ಲವೇ? ಇದರ ಬಗ್ಗೆ ನೀವೇನಂತೀರಿ?

ಕನ್ನಡದ ವಿಶಾಲದ ಬ್ಲಾಗುಗಳ ಲೋಕದಲ್ಲಿ ವಿಹರಿಸುವಾಗ ಎಡತಾಕುವ ಬ್ಲಾಗುಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನೆಲ್ಲಾ ಸಂಗ್ರಹಿಸಿಡುವ ಉದ್ದೇಶ ಈ ಲೇಖನಗಳದ್ದು. ಐದೈದೇ ಪ್ರತಿಕ್ರಿಯೆಗಳ ಗುಚ್ಚಗಳಿವು.

……………………………………………………………………….

ಮೌನದ ಮೊರೆ

ನನ್ನ ಅಭಿಪ್ರಾಯದಲ್ಲಿ, ಮೌನದ ಆಳದಿಂದ ಹುಟ್ಟುವ ಮಾತಿಗೆ ಮೌನದಷ್ಟೇ ಶಕ್ತಿಯಿರುತ್ತದೆ. ಮೌನ ವೈಯಕ್ತಿಕವಾದದ್ದು. ಮೌನ ಎಂದರೆ ಮಾತಿನ ಅನುಪಸ್ಥಿತಿಯೇ ಅಥವಾ ಮೌನದ ಅನುಪಸ್ಥಿತಿಯೇ ಮೌನವೇ?
ಮೌನ ಎಂದರೆ ಸಮಗ್ರವಾದ ಅರ್ಥದಲ್ಲಿ ಚಲನೆಯಿಲ್ಲದ್ದು, ಸದ್ದಿಲ್ಲದ್ದು, ಅಲುಗಾಟವಿಲ್ಲದ್ದು, ಚಂಚಲತೆಯಿಲ್ಲದ್ದು ಎನ್ನಬಹುದಾದರೆ ನಮ್ಮೊಳಗೆ ಮೌನ ನೆಲೆಸದೆ ನಾವು ಆಚರಿಸುವ ‘ಮೌನ’ ಕೇವಲ ಮಾತಿನ ಅನುಪಸ್ಥಿತಿಯಾಗುತ್ತದೆ ಅಲ್ಲವೇ?
ಸದ್ದಿಗೆ ಅಡಿಕ್ಟ್ ಆಗುವುದರ ಬಗ್ಗೆ ನನ್ನ ಅನುಭವವನ್ನೂ ಕೇಳಿ, ನಮ್ಮ ಹಾಸ್ಟೆಲ್ಲಿನಲ್ಲಿ ಊಟದ ಸಮಯದಲ್ಲಿ ಒಂದು ಸಿನೆಮಾ ಇಲ್ಲವೇ, ಸಿನೆಮಾ ಹಾಡುಗಳನ್ನು ಕೇಳದೆ ಊಟ ಮಾಡಿದರೆ ತಿಂದದ್ದು ಮೈಗೆ ಹತ್ತುವುದೇ ಇಲ್ಲ ಎನ್ನುವ ವಾತಾವರಣವಿದೆ.

……………………………………………………………………….

ಅಮೃತಾಳ ಲೈಸೆನ್ಸ್ ಹಾಗೂ ನನ್ನ ಆತಂಕ

ಅಕ್ಕಾ,
ಒಬ್ಬ ಅಮೃತಾಳು ಇಡೀ ಪೀಳಿಗೆಯನ್ನು ಅದು ಹೇಗೆ ಪ್ರತಿನಿಧಿಸಿಯಾಳು? ಹಾಗೆ ನೋಡಿದರೆ ಪ್ರತಿ ಪೀಳಿಗೆಯಲ್ಲು ಆ ಸಮಾಜದ ಕಣ್ಣಿಗೆ ‘ಅಮೃತ’ಳ ಹಾಗೆ ಕಾಣುವವರು ಇದ್ದೇ ಇರುತ್ತಾರಲ್ಲವೇ? ಈ ವಿಷಯವನ್ನು ಹಿಡಿದುಕೊಂಡು ಏನೆಲ್ಲಾ ಮಾತನಾಡುವಾಗ ನಮಗೆ ಈ ಎಚ್ಚರವಿರುವುದು ಒಳ್ಳೆಯದಲ್ಲವೇ?

……………………………………………………………………….

ಜಾನುವಾರು ಜಾತ್ರೆ ಬಯಲು

ಬದಲಾವಣೆಯೇ ಜಗದ ನಿಯಮ ಎನ್ನುವ ಸರಳವಾದ ಗೀತೆಯ ವಾಕ್ಯ ನನಗೆ ಕ್ಲೀಷೆಯಾಗಿ ಕಾಣುತ್ತಿದೆ. ಜಗವೆಂದರೆ ತಾನೆ ಏನು? ಬಾಲ್ಯದ ದಿನಗಳ ನೆನಪನ್ನು ಹಸಿರಾಗಿಟ್ಟುಕೊಳ್ಳ ಬಯಸುವಂತಹ ನಮ್ಮಂತಹ ಸಹಸ್ರ ಸಹಸ್ರ ಮಂದಿಯ ಗುಂಪೇ ಅಲ್ಲವೇ? ಹಾಗಾದರೆ ಈ ಎಲ್ಲಾ ಬದಲಾವಣೆಗಳು ನಾವೇ ಮಾಡಿಕೊಂಡ ನಿಯಮಗಳೇ? ಕೋಟಿ ಕೋಟಿ ವ್ಯಕ್ತಿಗಳ ಒಟ್ಟು ಗುಂಪಿಗೆ ಕೊಟ್ಟ ‘ಜಗ’ ಎಂಬ ಹೆಸರೇ ಬದಲಾವಣೆಯ ನಿಮಗಳನ್ನು ನಿರ್ಧರಿಸುತ್ತದೆಯೇ?
ಮನುಷ್ಯನ ವೈಯಕ್ತಿಕ ಬಯಕೆ ಹಾಗೂ ಆಸೆಗಳು ಸಾಮಾಜಿಕ ಮುಖವನ್ನು ಕಾಣುವಾಗ ಬದಲಾಗುತ್ತವೆಯೇ? ಹೆಣ್ಣು ಮಕ್ಕಳನ್ನು ಕಮೊಡಿಟಿಯ ಹಾಗೆ ಕಾಣುವುದು ಎಂಥಾ ದುರಂತ ಎಂಬ ವೈಯಕ್ತಿಕ ಅನ್ಜಿಪ್ರಾಯದ ಸಿನೆಮಾ ನಿರ್ದೇಶಕನಿಗೆ ಸಿನೆಮಾದಲ್ಲಿ ಹಾಗೆ ಕಾಣುವ ಪ್ರವೃತ್ತಿ ಸಿನೆಮಾದ ಗ್ರಾಮರ್ ಅನ್ನಿಸಿಬಿಡುವುದು ಹೇಗೆ?
ನಾವು ಒಟ್ಟೊಟ್ಟಿಗೆ ಎರಡೆರಡು ಬದುಕನ್ನು ಜೀವಿಸುತ್ತಿದ್ದೆವಾ?

……………………………………………………………………….

ಕಥೆಯದೊಂದು ಪಾತ್ರ- ಚಂದ್ರಾ

ಅಕ್ಕಾ,
ಹೌದು ಇಂಥವರ ಬಗ್ಗೆ ನನಗೂ ಇಂಗದ ಅಭಿಮಾನ ಹಾಗೂ ಬೆರಗು ಇದೆ. ನಮ್ಮ ನಡುವೆ ಇರುವಂಥಹ ಬಹುತೇಕ ಸಮಸ್ಯೆಗಳನ್ನು, ಸಾಮಾಜಿಕ ಪಿಡುಗುಗಳನ್ನು ಒಪ್ಪಿಕೊಂಡು, ಒಂದು ಕೊಸರುವಿಕೆ, ಒಂದು ಹೋರಾಟವಿಲ್ಲದೆ ಬದುಕುವಂತಹ ಸಾವಿರಾರು ಮಂದಿಯಿರುವುದರಿಂದಲೇ ಯಾವುದೇ ಸಮಸ್ಯೆಗೆ ಪರಿಹಾರ ಹೊರಗಿನಿಂದ ಸಾಧ್ಯವಾಗದು. ತನ್ನ ಗಂಡ ತನಗೆ ಹೊಡೆಯುವುದು ಹಿಂಸೆಕೊಡುವುದು ಆತನ ಹಕ್ಕು ಎಂದೇ ನಂಬಿಕೊಂಡ ಹಾಗೂ ಆತ ಹೊಡೆದದ್ದನ್ನು ಪ್ರಶ್ನಿಸುವವರನ್ನೇ ಸಂಶಯದಿಂದ ಕಾಣುವ ಹೆಣ್ಣುಮಕ್ಕಳೇ ನಿಜವಾಗಿಯೂ ಈ ಪಿಡುಗಿಗೆ ಉಸಿರು ಉಳಿಸಿರುವವರು. ತಮ್ಮ ದೌರ್ಬಲ್ಯಗಳನ್ನು, ಹೊರಗಿನ ಬಲಾತ್ಕಾರವನ್ನು ತಾವೇ ಮೀರುವ ಇಂಥವರೇ ಮನುಷ್ಯ ಚೈತನ್ಯದ ಶಕ್ತಿಯ ಬಗ್ಗೆ ನನ್ನಲ್ಲಿ ನಂಬಿಕೆ ಉಳಿಸಿರುವವರು.
ಈ ಪ್ರಕ್ರಿಯೆ ಸಮಾಜದ ಎಲ್ಲಾ ಬಗೆಯ ಸಮಸ್ಯೆಗಳಿಗೂ ಅನ್ವಯಿಸುತ್ತದೆ ಅನ್ನಿಸುತ್ತದೆ.

………………………………………………………………………….

ಒಂದು ಚರ್ಚೆ

ಇಂತಹ ಸಂಗತಿಗಳ ಬಗ್ಗೆ ಮಾತನಾಡುವಾಗ ನನಗೆ ಅನವಶ್ಯಕವಾದ ಗೊಂದಲ ಕಾಡುತ್ತದೆ. ಕೊನೆಗೆ ಅಂತ್ಯವಿರದ ಸಿನಿಕತೆ ಆವರಿಸಿಕೊಂಡಂತಾಗುತ್ತದೆ.

ಹಿಂದೆ ಕಮೆಂಟು ಬರೆಯುವಾಗ ಒಬ್ಬ ಅಮೃತ ಇಡೀ ಜನಾಂಗದ ಪ್ರತಿನಿಧಿಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದೆ. ಆದರೆ ನಮ್ಮ ಮನೆಯಲ್ಲೇ, ನಮ್ಮ ಮಗಳಾಗಿಯೋ, ನಮ್ಮ ಸಹೋದರಿಯಾಗಿಯೋ ಅಂತಹ ಒಬ್ಬ ಅಮೃತ ಇದ್ದಾಗ ನಾವು ವ್ಯಕ್ತ ಪಡಿಸುವ ಭಾವಕ್ಕೂ, ನಮ್ಮ ತಲ್ಲಣಕ್ಕೂ ಆ ಅಮೃತ ಎನ್ನುವವಳು ಹೊಸ ಜನಾಂಗದ ಬಹುಸಂಖ್ಯಾತರಿಗೆ ಸೇರಿರದ ಒಂದು ಮನಸ್ಥಿತಿಯ ಪ್ರತಿನಿಧಿ ಎಂದು ಯೋಚಿಸಿದಾಗ ಹುಟ್ಟುವ ಭಾವಗಳಿಗೂ ವ್ಯತ್ಯಾಸವಿದೆಯಾ?

ಬದಲಾವಣೆ ಜಗದ ನಿಯಮ. ಬದಲಾವಣೆಗೆ ನಾವು ತೆರೆದುಕೊಳ್ಳಬೇಕು ಎಂದು ನಾವು ಮುಕ್ತಕಂಠದಿಂದ ಹೇಳುತ್ತಿದ್ದರೂ ನಮ್ಮತನಕ್ಕೆ ಗಂಟು ಬಿದ್ದು ಅದನ್ನೇ ಶ್ರೇಷ್ಠ ಎಂದು ಭಾವಿಸಿ, ಹೊಸತನ್ನು ಅನುಮಾನದ ದೃಷ್ಠಿಯಿಂದ ನೋಡದಿರಲು ಸಾಧ್ಯವಾಗದಂತಹ ಅಸಹಾಯಕತೆಯಲ್ಲಿ ಸಿಲುಕಿಕೊಂಡಾಗ ‘ಬದಲಾವಣೆಯ ಜಗದ ನಿಯಮ’ವನ್ನು ಹೇಗೆ ಗ್ರಹಿಸುತ್ತೇವೆ?

………………………………………………………………………….

ಕನ್ನಡದ ವಿಶಾಲದ ಬ್ಲಾಗುಗಳ ಲೋಕದಲ್ಲಿ ವಿಹರಿಸುವಾಗ ಎಡತಾಕುವ ಬ್ಲಾಗುಗಳಲ್ಲಿ ನನ್ನ ಪ್ರತಿಕ್ರಿಯೆಯಾಗಿ ವ್ಯಕ್ತಪಡಿಸುವ ಅಭಿಪ್ರಾಯಗಳನ್ನೆಲ್ಲಾ ಸಂಗ್ರಹಿಸಿಡುವ ಉದ್ದೇಶ ಈ ಲೇಖನಗಳದ್ದು. ಐದೈದೇ ಪ್ರತಿಕ್ರಿಯೆಗಳ ಗುಚ್ಚಗಳಿವು.

………………………………………………………………………………………..

“ಸಾಲ ಬೇಕಿದ್ದರೆ ಆತ್ಮ ಇರುವಿಕೆ ಸಾಬೀತುಪಡಿಸಿ!”

ಐಸಿ ಕೈಸಿ ಹೈ ಬ್ಯಾಂಕಿನವರ ಈ ಪಾಟಿ ಸವಾಲಿನಿಂದ ನಾಡಿನ ರೈತ ಕಂಗಾಲಾಗಿರುವುದು ‘ಲಂಡನ್ನಿನಲ್ಲಿ ಕಣ್ ಬಿಟ್ಟ ಮಣ್ಣಿನ ಮೊಮ್ಮಗ’ನ ಆಣೆಗೂ ನಿಜ. ಇಷ್ಟು ದಿನ ತಮ್ಮ ಕಷ್ಟಗಳಿಗೆ ಯಾವುದಕ್ಕೂ ‘ಸಾಲದ’ ‘ಸಾಲ’ದ ಶೂಲಕ್ಕಾಗಿ ಮನೆ, ಗುಡಿಸಲು, ಎಮ್ಮೆ, ಆಕಳು, ಟ್ರಾಕ್ಟರ್ರು, ಹೆಂಡತಿಯ ಮಾಂಗಲ್ಯ ಎಲ್ಲವನ್ನೂ ಕೊಟ್ಟ ಮೇಲೂ ಕೊನೆಗೆ ಕನಿಷ್ಟ ಪಕ್ಷ ಬೇಕೆಂದಾಗ ನೀಗಿಕೊಳ್ಳಲು ಆತ್ಮವಾದರೂ ಇರುತ್ತದಲ್ಲ ಎಂಬ ನೆಮ್ಮದಿಯಲ್ಲಿದ್ದ ಉಳುವ ಯೋಗಿ ಈಗ ಗಾಬರಿಯಾಗಿದ್ದಾನೆ.
ಈ ನಡುವೆ ನಮ್ಮ ಸುದ್ದಿ ಸಂಸ್ಥೆ ಮುದ್ದಿ ತಿಂದು ನಿದ್ದಿ ಹೊಡೆಯುತ್ತಿದ್ದ ‘ಬುದ್ಧಿ’ಯವರ ಬಳಿ ‘ಸದ್ದಿ’ಲ್ಲದ ಹಾಗೆ ಹೋಗಿ ಇದ್ಕ ‘ಮದ್ದಿ’ಲ್ಲೇನ್ರಿ ಅಂತ ಕೇಳ್ತು. ಅದ್ಕ ನಿದ್ದಿ ಗೌಡ್ರು ಅಲ್ರೀ ಅವರ ಆತ್ಮ ಅವರಿಗೆ ಕೊಡ್ಲೇ ಬೇಕು ಇಲ್ಲಾಂದ್ರೆ ಅವರು ಆತ್ಮ ಹತ್ಯೆ ಮಾಡಿಕೊಳ್ಳೋದಕ್ಕೆ ಹೇಗೆ ಸಾಧ್ಯವಾಗುತ್ತೆ? ಈ ನಿಟ್ಟಿನಲ್ಲಿ ನಾನು ಸಂಪೂರ್ಣ ಬೆಂಬಲವನ್ನು ಸೂಚಿಸ್ತೀನಿ ಎಂದರು ತೂಕಡಿಸುತ್ತ.

………………………………………………………………………………………..

ಆರ್ಕುಟ್ಟಿನಲ್ಲಿ ನಡೆದ ಚರ್ಚೆಯಲ್ಲಿನ ನನ್ನ ಅಭಿಪ್ರಾಯ

ನಾನು ಮುಂಚಿನಿಂದಲೂ ಹೇಳುತ್ತಿರುವುದು ಒಂದೇ ಮಾತನ್ನು, ಒಂದು ಸಿನೆಮಾವನ್ನು ನಾವು ಹೇಗೆ ವಿಮರ್ಶೆ ಮಾಡಬೇಕು?
ಚೆನ್ನಾಗಿದೆ ಎಲ್ಲರೂ ನೋಡಲೇ ಬೇಕು ಅಥವಾ ಚೆನ್ನಾಗಿಲ್ಲ ಯಾರಾದರೂ ಅದನ್ನು ನೋಡಿದರೆ ಅವರು ಕೀಳು ಅಭಿರುಚಿಯವರು ಎನ್ನುವ ತೀರ್ಪನ್ನು ನೀಡುವುದು ವಿಮರ್ಶೆಯ ಕೆಲಸವೇ? ಹೀಗೆ ನಾವೆಲ್ಲಾ ಒಂದು ಸಾರ್ವಜನಿಕ ವೇದಿಕೆಯಲ್ಲಿ ನಡೆಸುತ್ತಿರುವ ಚರ್ಚೆಯಲ್ಲಿ ಕೊಡಬೇಕಾದ್ದು ವಿಮರ್ಶೆ. ನನಗೇನನ್ನಿಸ್ತು ಅಂತ ಬೇಕಾದರೆ ಪರ್ಸನಲ್ ಡೈರಿಗಳಲ್ಲಿ, ಬ್ಲಾಗುಗಳಲ್ಲಿ ಬರೆದಿಟ್ಟುಕೊಳ್ಳಬಹುದು.
ಒಂದು ಸಿನೆಮಾದಲ್ಲಿ ಬೇರೆ ಬೇರೆ ಡಿಪಾರ್ಟ್ ಮೆಂಟ್‌ಗಳಿರ್ತವೆ. ಕಥೆ, ಚಿತ್ರಕತೆ(ವ್ಯತ್ಯಾಸ ಗಮನಿಸಿ), ನಿರೂಪಣೆ, ಸಂಭಾಷಣೆ, ಸಾಹಿತ್ಯ, ಸಂಗೀತ, ಅಭಿನಯ,ಸಿನಿಮಾಟೊಗ್ರಫಿ… ಈ ಎಲ್ಲಾ ವಿಭಾಗದಲ್ಲಿ ಸಿನೆಮಾ ಹೇಗೆ ಪರ್ ಫಾರ್ಮ್ ಮಾಡಿದೆ ಎನ್ನುವುದನ್ನು ಹೇಳುವುದು ವಿಮರ್ಶೆ. ಕಥೆ ಚೆನ್ನಾಗಿಲ್ಲ , ಶಕ್ತವಾಗಿಲ್ಲ ಓಕೆ, ಅದಕ್ಕೆ ಮೈನಸ್ ಪಾಯಿಂಟ್ ಕೊಟ್ಟು ಪಕ್ಕಕ್ಕಿಡಿ ಅನಂತರದ ಡಿಪಾರ್ಟ್ ಮೆಂಟ್‌ಗಳಲ್ಲಿ ಸಿನೆಮಾ ಹೇಗೆ ಇದೆ ಎನ್ನುವುದನ್ನು ಬರೆಯಿರಿ. ಇದನ್ನು ಸಿನಿಮಾ ವಿಮರ್ಶಕ ಮಾಡಬೇಕು ಅದೇ ಕಾರಣಕ್ಕೆ ನಾನು ಈ ಟಾಪಿಕ್ ಹಾಕಿದ್ದೇ ಹೊರತು ಗಾಳಿಪಟ ದುನಿಯಾಗಿಂತ, ಮುಂಗಾರು ಮಳೆಗಿಂತ ಚೆನ್ನಾಗಿದೆ ಎಂದು ವಾದಿಸುವುದಕ್ಕೆ ಅಲ್ಲ.
ಇನ್ನು ಸೂತ್ರ ಹಾಗೂ ಮಳೆಯ ಬಗ್ಗೆ, ಒಪ್ಪಿಕೊಳ್ಳುತ್ತೇನೆ, ನಿಮ್ಮ ಪ್ರಕಾರ ಸಿನೆಮಾಗೆ ಕತೆಯೇ ಸೂತ್ರ, ಮಳೆಗೆ ಮೋಡವಿದ್ದಂತೆ ಎಂದು. ಆದರೆ ನಾನು ಅವುಗಳ ವ್ಯಾಖ್ಯಾನವನ್ನೇ ಬದಲಾಯಿಸಬಹುದಲ್ಲ, ಸಿನೆಮಾಗೆ ನಿರ್ದೇಶನವೇ ಸೂತ್ರ ಎಷ್ಟೋ ಪರಿಣಾಮಕಾರಿ ಹಾಗೂ ಶಕ್ತಿಶಾಲಿ ಕತೆಗಳು ಒಳ್ಳೆಯ ಸಿನೆಮಾ ಆಗುವುದರಲ್ಲಿ ಯಾಕೆ ಸೋತವು(ಉದಾಹರಣೆಗೆ ಡಾ ವಿಂಚಿ ಕೋಡ್) ಎನ್ನಬಹುದಲ್ಲ? ಇನ್ಯಾರೋ ಎಲ್ಲಾ ಸರಿ ಇದೆ ಹೀರೋನ ನಟನೆಯೇ ಇಲ್ಲ ಅಂದ ಮೇಲೆ ಸೂತ್ರವಿಲ್ಲದ ಗಾಳಿಪಟವಾಗೋದಿಲ್ವೆ ಎನ್ನಬಹುದಲ್ವಾ?
ನೀವೇ ಹೇಳಿದ್ದೀರಿ, ಮು.ಮಗಿಂತ ದುನಿಯಾ ಕತೆ ಚೆನ್ನಾಗಿದೆ ಅಂತ ಆದರೆ ನೀವೇಕೆ ಆರು ಬಾರಿ ಮುಮ ನೋಡಿ ದುನಿಯಾವನ್ನು ಒಂದೇ ಬಾರಿ ನೋಡಿದ್ರಿ? ಈ ಹಿನ್ನೆಲೆಯಲ್ಲೇ ಸಿನಿಮಾಕ್ಕೆ ಹಣ ಹಾಕುವವರು ಯೋಚಿಸಿದರೆ ತಪ್ಪೇನು ಅಲ್ವಾ?

ಸೋಮಣ್ಣ,
ಕೆಲವು ಡೈಲಾಗ್ ಗಳನ್ನು ಕೋಟ್ ಮಾಡಿ ಕೀಳು ಅಭಿರುಚಿಯ ಸಿನೆಮಾ ಅನ್ನೋದು ಎಷ್ಟು ಬಾಲಿಶವಾಗುತ್ತೆ ಗೊತ್ತಾ? ಮೊದಲೇ ಹೇಳ್ತಿದ್ದೀನಿ, ನಾನು ಯಾವುದಕ್ಕೂ ಗಾಳಿಪಟವನ್ನು ಕಂಪೇರ್ ಮಾಡುತ್ತಿಲ್ಲ, ಕವಿತಾ ಲಂಕೇಶ್‌ರ ‘ಅವ್ವ’ ಸಿನೆಮಾದಲ್ಲಿ ಶೃತಿ ಮಾತಿಗೊಂದು ಬಾರಿ ಮುಂಡೆಗಂಡ, ಸೂ..ಮಗೆನೇ ಅಂತ ಹೇಳ್ತಾರೆ ಅಂತ ಅದನ್ನು ಕೀಳು ಅಭಿರುಚಿ ಅನ್ನೋಕಾಗುತ್ತಾ? ಅಲ್ಲಿ ಪಾತ್ರದ ಸಂಸ್ಕ್ರಾರ, ಹಿನ್ನೆಲೆ ಗಮನಿಸಬೇಕಲ್ವಾ? ಯೋಚಿಸಿ ಅನಂತರವೂ ನಾನು ಹೇಳಿದ್ದು ತಪ್ಪು ಎನ್ನಿಸಿದರೆ ನನ್ನದು ಕೀಳು ಅಭಿರುಚಿಯೇ ಅಂತ ತಿಳಿಯಲಡ್ಡಿಯಿಲ್ಲ.
ಇನ್ನು ಕಿಟ್ಟಿಯ ಪ್ರೀತಿಯ ಬಗ್ಗೆ… ಪ್ರೀತಿಗೆ ಬೆಲೆ ಯಾರು ಕಟ್ತಾರೆ ಸೋಮಣ್ಣ? ನೀವಾ, ನಾನಾ? ದೇವರ ಬಗ್ಗೆ ಯಾರು ಹೇಳೊದು ಸತ್ಯ ನಾನಾ, ನೀವಾ? ಅವರವರ ಪಾಲಿಗದು ಸತ್ಯ, ಹೀಗಿರುವಾಗ ಪ್ರೀತಿಯ ಬೆಲೆ ಗೊತ್ತಿಲ್ಲ ಎಂದು ಬೇರೆಯವರನ್ನು ದೂಷಿಸುವುದು ಎಷ್ಟು ಮಟ್ಟಿಗೆ ಸರಿ ನೀವೇ ಹೇಳಿ ಸೋಮಣ್ಣ…

…………………………………………………………………………………………

“ಸಂಶೋಧನೆಗಳ ಯಶಸ್ಸಿಗೆ ಯುದ್ಧವೂ ಮೂಲವಾಗಬೇಕೆ?”

ರವಿಯವರೇ,
“ಆದರೆ ವಿಜ್ಞಾನ ಮತ್ತು ತಂತ್ರಜ್ಞಾನದ ಈ Speedy ಅಳವಡಿಕೆಗೆ ಮತ್ತು ಎಷ್ಟೋ ಸಂಶೋಧನೆಗಳಿಗೆ ಯುದ್ಧವೇ ಕಾರಣವಾಗುವುದು ಮಾತ್ರ ಚರಿತ್ರೆಯ ಕ್ರೂರವ್ಯಂಗ್ಯ; ವಿಷಾದನೀಯ.”
ನಿಮ್ಮ ಮಾತು ನಿಜ. ಆವಶ್ಯಕತೆಗಳೇ ಸಂಶೋಧನೆಗಳ ತಾಯಿ ಎಂದು ಹೇಳಿಲ್ಲವೇ? ದೇಶವೊಂದಕ್ಕೆ ಅಪಾಯ ಎದುರಾದಾಗಲೇ ಅದರ ಜನರ ಗರಿಷ್ಟ ಮಟ್ಟದ ಸಾಧನೆ ವ್ಯಕ್ತವಾಗಿವುದು.

………………………………………………………………………………………

ನಾಲ್ಕು ಮಾತಿಗೂ ಮಕ್ಕಳು ಹುಟ್ಟೋದಕ್ಕೂ ಏನು ಸಂಬಂಧ?

ಇದು ಭಾಮಿನಿಯ ಷಟ್ಪದಿ. ಇಲ್ಲಿ ಪುರುಷ ಪುಂಗವರ ಚೌಪದಿಯನ್ನೂ ಸೇರಿಸುವುದಾದರೆ ಒಂದು ಮಾತು.
ಹೆಣ್ಣಿಗೆ ಬಂಜೆ ಎಂದು ಹೆಸರು ಕೊಟ್ಟು ಸಮಾಜ ನೋಡುವಾಗ ಅದರ ಕಣ್ಣಲ್ಲಿರುವ ಸ್ವಲ್ಪ ಗೇಲಿ, ಹೆಚ್ಚು ಕನಿಕರ ಗಂಡಸನ್ನು ‘ನಾಮರ್ದ’ ಎಂದು ಕರೆಯುವಾಗ ಬದಲಾಗುತ್ತದೆ. ಅಲ್ಲಿ ಕನಿಕರಕ್ಕೆ ಜಾಗವೇ ಇರುವುದಿಲ್ಲ. ಸಮಾಜ ಕಣ್ಣ ತುಂಬ ಗೇಲಿ ಥಕಥೈ ಅಂತ ಕುಣಿಯುತ್ತಿರುತ್ತದೆ. ಬಂಜೆ ಎನ್ನಿಸಿಕೊಂಡ ಹೆಣ್ಣಿಗಿಂತ ನಪುಂಸಕ ಎನ್ನಿಸಿಕೊಂಡ ಗಂಡು ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತಾನೆ. ಗಂಡಿಗೆ ಸಮಾಜದಲ್ಲಿ ‘ಅದೇ’ ಗೌರವದ ಸ್ಥಾನವನ್ನು ಕೊಟ್ಟಿರುವಾಗ ಅದನ್ನೇ ಆತ ಕಳೆದುಕೊಂಡರೆ ಅವನ ಅಸ್ತಿತ್ವವೇ ಇಲ್ಲದ ಹಾಗಾಗುತ್ತದೆ.ಅದರಿಂದ ಗಂಡಸನ್ನು ಪಾರುಮಾಡಲು ಹೆಣ್ಣು ಈ ರೀತಿಯ ತ್ಯಾಗಕ್ಕೆ ಸಿದ್ಧಳಾಗುತ್ತಾಳೆನೋ…

………………………………………………………………………………………

“ಮಂಗ-ಳ ವಿವಾಹವಿದು… ಬಂಧನ ಅಲ್ಲ!”

ಮದುವೆಯೆಂಬುದು ಕೇವಲ ಹೆಣ್ಣು ಗಂಡಿನ ನಡುವಿನ ಫಿಸಿಕ್ಸು, ಮೆಕಾನಿಕ್ಸು, ಎಕನಾಮಿಕ್ಸು ಹಾಗೂ ಭರಪೂರವಾದ ಬಯಾಲಜಿ ಅಲ್ಲ. ಅದು ಎರಡು ಆತ್ಮಗಳ ಸಮ್ಮಿಲನ ಎಂಬ ಬಹುದೊಡ್ಡ ಚಿಂತಕರ ಮಾತನ್ನು ಉಲ್ಲೇಖಿಸುತ್ತಾ, ಆತ್ಮ ಅವಿನಾಶಿ, ಬೇರೆ ಬೇರೆ ದೇಹಗಳನ್ನು ಧರಿಸಿ ಅದು ಭೂಮಿಯ ಮೇಲೆ ಪಾಪವನ್ನು ಹೆಚ್ಚು ಮಾಡುವುದಕ್ಕಾಗಿ ಅವತರಿಸುತ್ತದೆ. ಹೀಗಾಗಿ ಅಂತರ ಕೋತಿ ವಿವಾಹಗಳು, ಮಾನವ-ಕೋತಿ ವಿವಾಹಗಳು, ಕತ್ತೆ- ಕೋತಿ ವಿವಾಹಗಳು ನಡೆಯಲೇ ಬೇಕು ಆಮೂಲಕ ಆತ್ಮಗಳ ಸಮ್ಮಿಲನ ನಡೆಯ ಬೇಕು ಎಂದು ನಮ್ಮ ಸಂಸ್ಥೆ ಹಕ್ಕೊತ್ತಾಯ ಮಂಡಿಸುತ್ತಿದೆ. ಈ ಮಧ್ಯೆ ಹುಲಿ ಹಾಗೂ ಸಿಂಹಗಳ ಅನೈತಿಕ ಸಂಬಂಧದಿಂದ ಹುಟ್ಟಿದ ಲೈಗರ್‌ಗಳ ಹಿಂಡು ನಮ್ಮ ಕಚೇರಿಯನ್ನು ಸಂಪರ್ಕಿಸಿ ಕೇವಲ ಮದುವೆಯಲ್ಲ, ಮದುವೆಯಾಚೆಗಿನ ಸಂಬಂಧಗಳಿಗೂ ಮಾನ್ಯತೆ ಕೊಡಬೇಕು ಎಂದು ಒತ್ತಾಯಪಡಿಸಿವೆ.

………………………………………………………………………………………


Technorati : , ,

ಕವಿತೆಗಳು ಅರ್ಥವಾಗುವುದಿಲ್ಲ ಎನ್ನುವುದು ಒಂದು ಕಂಪ್ಲೆಂಟು. ಕವಿತೆಗಳ ವಿಮರ್ಶೆಯಂತೂ ಅರ್ಥವೇ ಆಗದು ಎನ್ನುವುದು ಇನ್ನೊಂದು ಕಂಪ್ಲೆಂಟು. ಕವಿತೆಗಳನ್ನು ಹೇಗೆ ಎದುರಿಸಬೇಕು? ಅವು ಗದ್ಯದಷ್ಟು ಸರಳವಲ್ಲ, ಕೇಳುವ ಮೊದಲೇ ಅರ್ಥ ಕೊಡುವಂಥವಲ್ಲ. ಪದ್ಯವನ್ನು ಅಧ್ಯಯನ ಮಾಡಬೇಕೆ, ಸುಮ್ಮನೆ ಮೆಲುವಾಗಿ ಗುನುಗಿಕೊಂಡು ಸುಮ್ಮನಾಗಬೇಕೆ, ಏಕಾಂತದಲ್ಲಿ ಮನಸ್ಸಲ್ಲಿ ತುಂಬಿಸಿಕೊಂಡು ಧೇನಿಸಬೇಕೆ?

ಇವೆಲ್ಲಾ ಪ್ರಶ್ನೆಗಳಿಗೆ ಕಿ.ರಂ.ನಾಗರಾಜ್ ಕೊಟ್ಟ ಸಮಂಜಸವಾದ ಸಮಾಧಾನವನ್ನು ಈ ವಾರ‘ಜಾನಕಿ’ಯವರು ತಮ್ಮ ‘ಹಾಯ್ ಬೆಂಗಳೂರ್‘ನ ಜಾನಕಿ ಕಾಲಮ್ಮಿನಲ್ಲಿ ಹಂಚಿಕೊಂಡಿದ್ದಾರೆ. ಅರ್ಥವಾದಷ್ಟೇ ಕವಿತೆ. ನಮಗೆ ಎಷ್ಟು ದಕ್ಕುತ್ತದೆಯೋ ಅಷ್ಟೇ ಕವಿತೆ. ಅದರಾಚೆ ಅರ್ಥ ಮಾಡಿಕೊಳ್ಳುವ ನಮ್ಮೆಲ್ಲಾ ಪ್ರಯತ್ನ ವ್ಯರ್ಥ. ಕವಿತೆ ಎಷ್ಟೆಷ್ಟು ಬಿಟ್ಟುಕೊಡುತ್ತಾ ಹೋಗುತ್ತದೆಯೋ ಅಷ್ಟು ಮಾತ್ರ ನಮ್ಮ ಪಾಲಿಗೆ ಬಂದ ಪಂಚಾಮೃತ. ಒಬ್ಬ ವ್ಯಕ್ತಿ ನಮಗೆ ಇಷ್ಟಿಷ್ಟೇ ಅರ್ಥವಾಗುತ್ತಾ ಹೋಗುವಂತೆ. ನಾವೇನಿದ್ದರೂ ಆತನೊಂದಿಗಿನ ಸಾಂಗತ್ಯಕ್ಕೆ ಹೆಚ್ಚಿನ ಸಮಯವನ್ನು, ಕಾಳಜಿಯನ್ನು, ಪ್ರೀತಿಯನ್ನು ಮುಡಿಪಿಟ್ಟು ಕೂರಬಹುದೇ ಹೊರತು ಆತನನ್ನು ಹೆಚ್ಚು ಅರ್ಥ ಮಾಡಿಕೊಳ್ಳಲು ಬಲಪ್ರಯೋಗ ಮಾಡಲಾಗದು. ಆತ ನಮಗೆಷ್ಟು ದಕ್ಕುತ್ತಾ ಹೋಗುತ್ತಾನೋ ಅದಷ್ಟೇ ಅವನು. ಆತನ ಬಗ್ಗೆ ಇನ್ನೊಬ್ಬ ಯಾರೋ ಏನು ಹೇಳುತ್ತಾನೆ ಅನ್ನುವುದರ ಮೇಲೆ ಗಾಸಿಪ್ ಸೃಷ್ಟಿಸಿಕೊಳ್ಳಬಹುದೇ ಹೊರತು ಆತನನ್ನು ಬೇರೊಬ್ಬರ ಮುಖಾಂತರ ಅರ್ಥ ಮಾಡಿಕೊಳ್ಳಲಾಗದು.

ಜಾನಕಿಯವರ ಮಾತುಗಳಲ್ಲೇ ಹೇಳುವುದಾದರೆ,

ವಿಮರ್ಶೆಯನ್ನು ಓದಿ ಕಾವ್ಯವನ್ನು ಓದುವವರ ಸಂಖ್ಯೆ ಎಷ್ಟಿದೆಯೋ ಗೊತ್ತಿಲ್ಲ. ಹಾಗೇ, ಕವಿತೆಯನ್ನು ಒಂದು ಗಣಿತದ ಸೂತ್ರದಂತೆ ಅಧ್ಯಯನ ಮಾಡುವುದೋ, ಒಗಟೆಂದು ಭಾವಿಸಿ ಬಿಡಿಸಲೆತ್ನಿಸುವುದೋ ಅದೊಂದು ಅರ್ಥವಾಗದ ಕಗ್ಗ ಎಂದು ಬೇರೆಯವರ ಹತ್ತಿರ ಇದಕ್ಕೆ ಅರ್ಥವೇನು ಎಂದು ಕೇಳುವುದೋ ಕವಿತೆಯನ್ನು ಮೆಚ್ಚುವವರು ಮಾಡುವ ಕೆಲಸ ಅಲ್ಲ. ಅದೇ ಕಾರ್ಯಕ್ರಮದಲ್ಲಿ ಕಿ ರಂ ನಾಗರಾಜ್ ಹೇಳಿದ್ದು ನಿಜಕ್ಕೂ ಅರ್ಥವತ್ತಾಗಿತ್ತು. ಈ ಕವಿತೆ ಅರ್ಥವಾಗುವುದಿಲ್ಲ ಎಂದು ಯಾರಾದರೂ ಹೇಳಿದರೆ ಅವರು ಉತ್ತರಿಸುತ್ತಾರಂತೆ; ಅರ್ಥವಾದಷ್ಟೇ ಕವಿತೆ. ಅದು ಪೂರ್ತಿ ಅರ್ಥವಾಗಬೇಕು ಎನ್ನುವ ಆತುರ ಯಾಕೆ? ಯಾವತ್ತೋ ಒಂದು ದಿನ ಅರ್ಥವಾಗುತ್ತೆ ಬಿಡಿ. ಅರ್ಥವಾಗದಿದ್ದರೂ ಸರಿಯೇ. ಅರ್ಥವಾಗಲೇಬೇಕು ಅನ್ನುವ ಹಠ ಯಾಕೆ?
ಅದೇ ಸರಿ. ಅರ್ಥವಾದಷ್ಟೇ ಅರ್ಥ. ಕವಿತೆ ಇನ್ನೊಬ್ಬರ ಹಾಗೆ ಅಂದುಕೊಂಡುಬಿಡೋಣ. ಜೊತೆಗಿದ್ದವರೂ ಅಷ್ಟೇ, ಎಷ್ಟು ಅರ್ಥವಾಗುತ್ತಾರೋ ಅಷ್ಟೇ.

ಸಾಹಿತ್ಯವನ್ನು ಸವಿದಷ್ಟೇ ಸಾಹಿತ್ಯದ ಬಗೆಗಿನ ಚರ್ಚೆಯನ್ನೂ ಸವಿಯಬಹುದು ಎನ್ನುವ ಅನುಭವವಾಗುತ್ತಿದೆ.


Technorati : ,

ಯಶವಂತ ಚಿತ್ತಾಲರು ಈ ಬಾರಿಯ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಅವರ ಶಿಕಾರಿಯನ್ನು ನಾನು ಹತ್ತನೆಯ ತರಗತಿಯಲ್ಲಿರುವಾಗ ಓದಿದ್ದು. ‘ಪುರುಷೋತ್ತಮ ಓದಿದ್ದು ಪಿಯುಸಿಯಲ್ಲಿ. ಅವರಿಗೆ ಪಂಪ ಪ್ರಶಸ್ತಿ ಸಲ್ಲುತ್ತಿರುವುದು ಸಂತೋಷದ ಸಂಗತಿ. ಇದರಷ್ಟೇ ಸಂತಸದ ಸಂಗತಿಯೆಂದರೆ ಅಬ್ದುಲ್ ರಶೀದರ ಸಂಪಾದಕತ್ವದಲ್ಲಿ ಪ್ರಾರಂಭವಾಗಿರುವ ಕೆಂಡ ಸಂಪಿಗೆ ಎಂಬ ಅಂತರ್ಜಾಲದ ನಿಯತಕಾಲಿಕೆಯಲ್ಲಿ ಈ ಭಾನುವಾರ ಚಿತ್ತಾಲರ ಸ್ಪೆಷಲ್. ಚಿತ್ತಾಲರ ಬಗ್ಗೆ ಕಥೆಗಾರ ವಿವೇಕ್ ಶಾನುಭೋಗರು, ಎಂ.ಎಸ್.ಶ್ರೀರಾಮ್ ಬರೆದಿದ್ದಾರೆ. ಸ್ವತಃ ಚಿತ್ತಾಲರ ಒಂದು ಕತೆ, ಒಂದು ಲೇಖನ ಪ್ರಕಟವಾಗಿವೆ. ಚಿತ್ತಾಲರ ಬಗ್ಗೆ ಜಯಂತ್ ಕಾಯ್ಕಿಣಿಕೂಡಾ ಬರೆದಿದ್ದಾರೆ. ಇನ್ನೂ ಹೆಚ್ಚಿನ ಬರಹಗಳು ಇಲ್ಲಿವೆ( 1 ).

yashawantha_chittala_07022008.jpg

ಕೆಂಡ ಸಂಪಿಗೆಯ ಘಮ ನನ್ನ ಇಡೀ ಭಾನುವಾರವನ್ನು ಆವರಿಸಿಕೊಳ್ಳಲಿದೆ. ಅಂತರ್ಜಾಲದಲ್ಲಿ ಕನ್ನಡ ಸಾಹಿತ್ಯದ ಕೊರತೆಯನ್ನು ಅನುಭವಿಸುತ್ತಿದ್ದ ಹಸಿದ ಮನಸ್ಸುಗಳಿಗೆ ಈ ಸಂಪಿಗೆಯ ಘಮ ಹಿತವಾಗಿ ಬೀಸುತ್ತಲಿರುವುದು ಸಂತೋಷದ ಸಂಗತಿ.

 

(photo source: thatskannada)


Technorati : , , , ,

Next Page »